– ಗ್ರಾಹಕರೇ ನೇರವಾಗಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ
ಬೆಂಗಳೂರು: ದೀರ್ಘಕಾಲದಿಂದ ನೀರಿನ ಬಿಲ್ (Water Bill) ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬೆಂಗಳೂರು ಜಲಮಂಡಳಿ ಹೊಸ ವರ್ಷದ ಹೊತ್ತಿನಲ್ಲೇ ಸಿಹಿ ಸುದ್ದಿ ಕೊಟ್ಟಿದೆ.
ʻಒನ್ ಟೈನ್ ಸೆಟಲ್‌ಮೆಂಟ್ʼ ಯೋಜನೆಗೆ ಸರ್ಕಾರದ ನಗರಾಭಿವೃದ್ದಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಸರ್ಕಾರದ ಆದೇಶದ ಅಡಿಯಲ್ಲಿ ಬಾಕಿ ಇರುವ ನೀರಿನ ಬಿಲ್ ಅಸಲು ಮೊತ್ತವನ್ನು (Principal Amount) ಏಕಕಾಲದಲ್ಲಿ ಪಾವತಿಸಿದರೆ, ಬಡ್ಡಿ ಮತ್ತು ದಂಡ 100% ಮನ್ನಾ ಮಾಡುವ ಯೋಜನೆ ಜಾರಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನಿರ್ದೇಶನದಂತೆ ಗ್ರಾಹಕ ಸ್ನೇಹಿ ನಿಯಮಾವಳಿಗಳನ್ನ ಅಳವಡಿಸಲಾಗಿದೆ. ಗ್ರಾಹಕರು ನೇರವಾಗಿ ಜಲಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ, ಹೊಸ ಆ್ಯಪ್‌ವೊಂದನ್ನ ನಿರ್ಮಿಸಲಾಗುತ್ತಿದ್ದು ಇವುಗಳಲ್ಲಿ ನೋಂದಣಿ ಮಾಡಿಕೊಂಡ ಗ್ರಾಹಕರಿಗೆ ಹಣ ಪಾವತಿಸಲು ಕಾಲಾವಕಾಶ ಮತ್ತು ಅಂತಿಮ ದಿನಾಂಕ ತಿಳಿಸಲಾಗುತ್ತದೆ. ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಯೋಜನೆ ಜಾರಿಗೊಳಿಸುವ ದಿನಾಂಕವನ್ನ ಶೀಘ್ರವೇ ಘೋಷಿಸಲಾಗುವುದು ಎಂದಿದ್ದಾರೆ.
ಯೋಜನೆಯ ವಿವರಗಳು:
* 3 ತಿಂಗಳ ಸುವರ್ಣಾವಕಾಶ: ಈ ಯೋಜನೆಯು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಮಾತ್ರ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪೂರ್ಣ ಅಸಲು ಪಾವತಿಸಿದ್ರೆ, ಅವರ ಖಾತೆಯನ್ನ ‘ಕ್ಲಿಯರ್’ ಮಾಡಲಾಗುತ್ತದೆ (Full Close).
* ಹೈದರಾಬಾದ್ ಮಾದರಿ: ಹೈದರಾಬಾದ್‌ನಲ್ಲಿ ಈ ಯೋಜನೆ ಎರಡು ಬಾರಿ ಯಶಸ್ವಿಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ಮಾದರಿಯನ್ನು ಇದೀಗ ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲಾಗಿದೆ.
* ಬ್ಯಾಕ್ ಎಂಡ್‌ನಲ್ಲಿ ಬಡ್ಡಿ ಮನ್ನಾ: ಗ್ರಾಹಕರು ಅಸಲು ಮೊತ್ತವನ್ನ ಪಾವತಿಸುತ್ತಿದ್ದಂತೆಯೇ, ತಂತ್ರಾಂಶದಲ್ಲಿ ಬಡ್ಡಿ ಮತ್ತು ದಂಡದ ಮೊತ್ತ ಸ್ವಯಂಚಾಲಿತವಾಗಿ ಮನ್ನಾ ಆಗಲಿದೆ.
ಕಟ್ಟಡಗಳ ಭೇಟಿ
ಸರ್ಕಾರಿ ಕಟ್ಟಡಗಳು ಮತ್ತು ವಾಣೀಜ್ಯ ಮಳಿಗೆಗಳಿಗೆ ಜಲಮಂಡಳಿಯ ವಿಶೇಷ ತಂಡವೇ ಖುದ್ದು ಭೇಟಿ ನೀಡಿ ಮಾಹಿತಿ ನೀಡಲಿದೆ. ವಸತಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳು ಸಂಪರ್ಕಿಸುತ್ತಾರೆ ಹಾಗೂ ವೆಬ್‌ಸೈಟ್ ಮತ್ತು ಆ್ಯಪ್ ಮೂಲಕವೂ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.



