ಕ್ಯಾನ್ಬೆರಾ: ದಂಪತಿಗೆ ಮಗು ಹುಟ್ಟಿದರೆ ಜವಾಬ್ದಾರಿ ಜಾಸ್ತಿ ಇರುತ್ತದೆ. ಅಲ್ಲದೆ ಅತ್ಯಂತ ಖುಷಿ ಹಾಗೂ ಪ್ರೀತಿಯಿಂದ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಬ್ಯುಸಿಯಾಗಿರುತ್ತಾರೆ. ಮಗುವಿನ ಜೊತೆ ತಾವೂ ಮಗುವಾಗಿ ಬಿಡುತ್ತಾರೆ. ಅಂತೆಯೇ ತಂದೆ ಹಾಗೂ ಮಗಳ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹೌದು. ಆಸ್ಟ್ರೇಲಿಯಾದ ಸಿಡ್ನಿಯ ಕಾಮಿಡಿಯನ್ ಜೋಶ್ ಹಾವ್ಕಿನ್ಸ್ ಅವರು ಇತ್ತೀಚೆಗಷ್ಟೇ ಹೆಣ್ಣು ಮಗುವಿನ ತಂದೆಯಾದರು. ಆ ಬಳಿಕ ಅವರು ತಮ್ಮ ಹೆಚ್ಚಿನ ಸಮಯವನ್ನು ಮಗಳ ಆರೈಕೆಗೆಂದು ಮೀಸಲಿಟ್ಟಿದ್ದರು. ಹೀಗೆ ತಮ್ಮ ಮಗಳೊಂದಿಗೆ ಸಮಯ ಕಳೆಯುತ್ತಿರುವ ಕಾಮಿಡಿಯನ್ನು ಆಕೆಯ ಚಲನಚಲನವನ್ನು ಅನುಕರಿಸಲು ಪ್ರಾರಂಭಿಸಿದರು. ಅಲ್ಲದೆ ಅದನ್ನು ವಿಡಿಯೋ ಕೂಡ ಮಾಡಿಕೊಂಡರು.
ವಿಡಿಯೋದಲ್ಲಿ ಮಗಳ ನಗು, ಅಚ್ಚರಿಯ ನೋಟ, ಕಣ್ಣುಗಳ ಚಲನೆ, ಆಕಳಿಗೆ, ಬೆರಳು ಚೀಪುವುದು.. ಹೀಗೆ ಆಕೆಯನ್ನು ಅನುಕರಣೆ ಮಾಡುವುದನ್ನು ಕಾಣಬಹುದಾಗಿದೆ. ಈ ವಿಡಿಯೋಗೆ ಹಾಲು ಕುಡಿಯುತ್ತಿರೋ ನನ್ನ ಮುದ್ದು ಮಗಳ ಮುಖವನ್ನು ಅನುಕರಿಸೋದು ಇದೀಗ ನನ್ನ ಹೊಸ ಫುಲ್ ಟೈಂ ಕೆಲಸವಾಗಿದೆ ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.
ಸದ್ಯ ಈ ವಿಡಿಯೋ 4.9 ಕೋಟಿಗೂ ಹೆಚ್ಚು ವ್ಯೂವ್ಸ್ ಬಂದಿದ್ದು, ಸರಿಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಇದರೊಂದಿಗೆ ಕಾಮಿಡಿಯನ್ ಮುಖಭಾವ ನೋಡಿ ಜನ ನಗ್ತಿದ್ದಾರೆ. ಅಲ್ಲದೆ ಆಕೆಯನ್ನು ಅನುಕರಣೆ ಮಾಡಲು ಎಷ್ಟು ಸಮಯ ತೆಗೆದುಕೊಂಡಿರುವುದಾಗಿ ಪ್ರಶ್ನಿಸಿದ್ದಾರೆ.