Monday, 16th July 2018

Recent News

ವೈರಲ್ ವಿಡಿಯೋ: ಸಿಂಪಲ್ ಐಡಿಯಾ ಬಳಸಿ ದರೋಡೆಕೋರರು ಬ್ಯಾಂಕ್‍ನೊಳಗೆ ನುಗ್ಗದಂತೆ ತಡೆದ ಸೆಕ್ಯೂರಿಟಿ ಗಾರ್ಡ್!

ಮೆಕ್ಸಿಕೋ: ಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸಲೀಸಾಗಿ ಅಂತಾರಲ್ಲ ಅದಕ್ಕೆ ಸ್ಪಷ್ಟ ಉದಾಹರಣೆ ಈ ವಿಡಿಯೋ. ಮೆಕ್ಸಿಕೋದಲ್ಲಿ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ತುಂಬಾನೇ ಸರಳವಾದ ಐಡಿಯಾ ಬಳಸಿ ಮೂವರು ಮುಸುಕುಧಾರಿ ದರೋಡೆಕೋರರನ್ನು ಬ್ಯಾಂಕ್ ಒಳಗೆ ನುಗ್ಗದಂತೆ ತಡೆದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ದರೋಡೆಕೋರರನ್ನು ನೋಡಿದ ತಕ್ಷಣ ಎಂಥವರಿಗಾದ್ರೂ ಒಂದು ಕ್ಷಣ ಗಾಬರಿಯಾಗುತ್ತೆ. ಏನು ಮಾಡಬೇಕು ಅಂತ ಥಟ್ಟನೆ ತೋಚೋದಿಲ್ಲ. ಕೆಲವರು ಅಲ್ಲಿಂದ ಓಡಿಹೋಗಲೂ ಯತ್ನಿಸಬಹುದು. ಆದ್ರೆ ಈ ವಿಡಿಯೋದಲ್ಲಿ ಮೂವರು ಮುಸುಕುಧಾರಿಗಳು ಬ್ಯಾಂಕಿನ ಮುಖ್ಯದ್ವಾರದೊಳಗೆ ನುಗ್ಗಿ ಎರಡನೇ ಬಾಗಿಲಿನ ಕಡೆಗೆ ಬಂದಿದ್ದಾರೆ. ಈ ವೇಳೆ ನೀಟಾಗಿ ಶರ್ಟ್, ಟೈ ಧರಿಸಿ ಕೂಲ್ ಆಗಿ ಕಾಣ್ತಿದ್ದ ಸೆಕ್ಯೂರಿಟಿ ಗಾರ್ಡ್ ಮುಸುಕುಧಾರಿಗಳನ್ನ ನೋಡಿ ಅಷ್ಟೇ ಕೂಲ್ ಆಗಿ ಹೋಗಿ ಬ್ಯಾಂಕಿನ ಗಾಜಿನ ಬಾಗಿಲನ್ನ ಲಾಕ್ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಇಷ್ಟು ಆರಾಮವಾಗಿ ಬಾಗಿಲನ್ನ ಲಾಕ್ ಮಾಡಿದ್ದು ನೋಡಿ, ಥೂ ನಮ್ಮ ಪ್ಲಾನ್ ಹಾಳಾಯ್ತು ಅಂತ ಆ ದರೋಡೆಕೋರರು ಅಲ್ಲಿಂದ ವಾಪಸ್ ಹೋಗಿದ್ದಾರೆ.

ಈ ವಿಡಿಯೋ ಈಗ ವೈರಲ್ ಆಗಿದ್ದು, ಈಗಾಗಲೇ ಯೂಟ್ಯೂಬ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ನೋಡುಗರು ಸೆಕ್ಯೂರಿಟಿ ಗಾರ್ಡ್‍ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನ ಕೊಂಡಾಡಿದ್ದಾರೆ. ಅಲ್ಲದೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋದ ದರೋಡೆಕೋರರನ್ನ ಕಂಡು ತಮಾಷೆ ಮಾಡಿದ್ದಾರೆ. ಅಯ್ಯೋ ಆ ದರೋಡೆಕೋರರು ಬ್ಯಾಂಕ್ ದರೊಡೆ ಮಾಡ್ಬೇಕು ಅಂತ ಬಂದು, ಗಾಜಿನ ಡೋರ್ ಒಡೆದರೆ ತಪ್ಪಾಗಬಹುದು ಅಂದುಕೊಂಡ್ರೇನೋ ಅಂತ ವ್ಯಂಗ್ಯ ಮಾಡಿದ್ದಾರೆ.

Leave a Reply

Your email address will not be published. Required fields are marked *