ಬಾಗಲಕೋಟೆ: ಗಲಾಟೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗಾಯಾಳು ವ್ಯಕ್ತಿಗೆ ಆಂಬುಲೆನ್ಸ್ ಒಳಗಡೆಯೇ ಇಬ್ಬರು ಮನಬಂದಂತೆ ಥಳಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 8ರಂದು ನಡೆದಿದೆ ಎಂದು ಹೇಳಲಾಗುತ್ತಿದೆ.
ನಡೆದಿದ್ದೇನು?: ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಹೊರವಲಯದ ಬಾರ್‍ನಲ್ಲಿ ನಾಲ್ವರು ಪಾರ್ಟಿ ಮಾಡ್ತಾರೆ. ಕಂಠಪೂರ್ತಿ ಕುಡಿದ ಮೇಲೆ ಅವರ ಮಧ್ಯ ಗಲಾಟೆ ನಡೆದು ಕೈಕೈ ಮಿಲಾಯಿಸಿದ್ದಾರೆ. ಪರಿಣಾಮ ಓರ್ವನಿಗೆ ಗಂಭೀರ ಗಾಯಗಳಾಗಿದೆ. ಆ ಸಂದರ್ಭದಲ್ಲಿ ಅದ್ಯಾರೋ 108 ಗೆ ಕರೆ ಮಾಡಿದ್ದು, ಕಲಾದಗಿ ಗ್ರಾಮದ 108 ವಾಹನದಲ್ಲಿ ಆಗಮಿಸಿದ ಸಿಬ್ಬಂದಿ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಗಾಯಾಳು ವ್ಯಕ್ತಿಯ ಜೊತೆ ಇಬ್ಬರು ವ್ಯಕ್ತಿಗಳು ಕೂತಿದ್ದು, ಕುಡಿದ ಮತ್ತಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಗಾಯಾಳುವಿಗೆ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾರೆ.
ಎದ್ದೇಳಲು ಸಾಧ್ಯವಾಗದೇ ಗಾಯಾಳು ನರಳುತ್ತಿದ್ದರೂ ಅದನ್ನು ಲೆಕ್ಕಿಸದೇ ಮನಬಂದಂತೆ ಥಳಿಸುತ್ತಾರೆ. ಹಲ್ಲೆ ಮಾಡಬೇಡಿ ಎಂದು 108 ಸಿಬ್ಬಂದಿ ಮನವಿ ಮಾಡಿದ್ರು ಅದನ್ನು ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಏನಾದರೂ ಹೆಚ್ಚು ಕಡಿಮೆ ಆದರೆ ಇರಲಿ ಎಂದು 108 ಸಿಬ್ಬಂದಿಯೇ ಹಲ್ಲೆ ನಡೆಸಿರುವುದನ್ನು ವಿಡಿಯೋ ಮಾಡಿದ್ರು ಎಂದು ಹೇಳಲಾಗುತ್ತಿದೆ.
ಈ ನಡುವೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ತಮಗೆ ಯಾರೂ ಏನು ಮಾಡಲ್ಲ ಅಂಥ ಹೇಳುತ್ತಲೇ ಸಿದ್ದರಾಮಯ್ಯ, ಚಿಮ್ಮನಕಟ್ಟಿ ಅಂಥೆಲ್ಲ ಮಾತಾಡ್ತಾರೆ. ಕೊನೆಗೆ ಗಾಯಾಳುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಒಂದು ವಾರ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ನಂತರ ಬಿಡುಗಡೆ ಆಗಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸಕೋಟೆ ಗ್ರಾಮದ ಲಂಕೆಪ್ಪ ಮಾಯಪ್ಪ ಸಿರಿಕಾರ(50) ಎಂದು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯ ವಿಜಯಕುಮಾರ ತಿಳಿಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.