– ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮೌದ್ಗಿಲ್ ಪತ್ರ
ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಹಾಸನಕ್ಕೆ ಪೊಲೀಸ್ ಕಾರಿನಲ್ಲಿಯೇ ಪ್ರಭಾವಿ ಸಚಿವರೊಬ್ಬರು ಅಕ್ರಮವಾಗಿ ಹಣ ಸಾಗಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಕೆಎ 04 ಎಂಎಚ್ 4477 ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 1.20 ಲಕ್ಷ ರೂ. ನಗದು ಹಣ ಸಾಗಿಸಲಾಗಿತ್ತು. ಇದು ಬೆಂಗಳೂರಿನ ಡೆಪ್ಯೂಟಿ ಕಮಿಷನರ್ ಪೊಲೀಸ್ ಅವರಿಗೆ ಸೇರಿದ ಕಾರಾಗಿದೆ ಎಂದು ಚುನಾವಣಾ ವಿಶೇಷ ಅಧಿಕಾರಿ ಮುನೀಷ್ ಮೌದ್ಗಿಲ್ ಅವರು ದೂರಿದ್ದಾರೆ.
ಈ ಸಂಬಂಧ ಮುನೀಷ್ ಮೌದ್ಗಿಲ್ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ಈ ಕುರಿತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಪತ್ರದಲ್ಲಿ ಏನಿದೆ?:
ಚುನಾವಣಾ ಅಧಿಕಾರಿಗಳು ಮೈಸೂರು ರಸ್ತೆಯಲ್ಲಿರುವ ಎಸ್.ಅಂಕನಹಳ್ಳಿಯಲ್ಲಿ ಏಪ್ರಿಲ್ 16ರಂದು ಗಸ್ತು ತಿರುಗುತ್ತಿದ್ದರು. ಆಗ ಜಿಲ್ಲಾಧಿಕಾರಿ ಪ್ರಿಯಾಂಕ ಅವರು ಜಿಲ್ಲಾ ನೋಡಲ್ ಅಧಿಕಾರಿ ವಿಕಾಸ್ ಅವರಿಗೆ ಕರೆ ಮಾಡಿ ಹೊಳೆನರಸೀಪುರದ ಚೆನ್ನಾಂಬಿಕಾ ಚಿತ್ರಮಂದಿರಕ್ಕೆ ತಕ್ಷಣವೇ ಬರುವಂತೆ ತಿಳಿಸಿದ್ದರು. ಅಲ್ಲಿಗೆ ಬಂದು ಇನ್ನೋವಾ ಕಾರನ್ನು ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿತ್ತು.
ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಭೇಟಿ ನೀಡಿದಾಗ ನೋಡಲ್ ಅಧಿಕಾರಿಗಳು ಹಣವನ್ನು ನಮ್ಮ ಕೈಗೆ ಒಪ್ಪಿಸಿದ್ದರು. ಬಳಿಕ ಹಣವನ್ನು ಏಣಿಸಿದಾಗ 500 ರೂ. ಮುಖ ಬೆಲೆಯ 200 ನೋಟು ಹಾಗೂ 100 ರೂ. ಮುಖ ಬೆಲೆಯ 200 ನೋಟು ಸೇರಿದಂತೆ 1.20 ಲಕ್ಷ ರೂ. ಕಾರಿನಲ್ಲಿ ಇತ್ತು. ಈ ಹಣವನ್ನು ಮುಖ್ಯ ಅಧೀಕ್ಷಕ ಉಪನಿರ್ದೇಶಕರಿಗೆ ಒಪ್ಪಿಸಲಾಗಿದೆ ಎಂದು ಪತ್ರ ಬರೆದಿದ್ದಾರೆ.