ಲಕ್ನೋ: ವಸತಿ ಶಾಲೆಯೊಂದರಲ್ಲಿ ಮಧ್ಯರಾತ್ರಿ ವಾರ್ಡನ್ ಒಬ್ಬಳು ದೆವ್ವದ ವೇಷ ಧರಿಸಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರಪ್ರದೇಶದ ಮೀರತ್‍ನಲ್ಲಿ ನಡೆದಿದೆ.
ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರೇ ಶೋಷಣೆಗೆ ಒಳಗಾದವರು. ಈ ಶಾಲೆಯ 8 ವಿದ್ಯಾರ್ಥಿನಿಯರು ತಾವು ಮಧ್ಯರಾತ್ರಿ ಅನುಭವಿಸುವ ತೊಂದರೆಗಳ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ತಕ್ಷಣವೇ ತನಿಖೆ ಕೈಗೊಂಡ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಮಧ್ಯರಾತ್ರಿ ಆಗುತ್ತಿದಂತೆ ವಾರ್ಡನ್ ದೆವ್ವದ ವೇಷ ಧರಿಸಿ, ಮುಖವನ್ನು ಮುಚ್ಚಿಕೊಂಡು ಶಾಲಾ ಆವರಣದಲ್ಲಿ ಓಡಾಡುತ್ತಾಳೆ. ಕೈಯಲ್ಲಿ ಸುಗಂಧ ದ್ರವ್ಯ ಹಿಡಿದು, ಅದನ್ನು ಕೆಲವು ಹುಡುಗಿಯರ ಮೈಮೇಲೆ ಸಿಂಪಡಿಸುತ್ತಾಳೆ. ಏನನ್ನೋ ಪಿಸುಗುಟ್ಟಿ ಹುಡುಗಿಯರನ್ನು ಮಾತನಾಡಿಸಲು ಪ್ರಯತ್ನಿಸುತ್ತಾಳೆ. ನಮ್ಮ ಬಟ್ಟೆಗಳನ್ನು ಎಳೆಯುತ್ತಾಳೆ. ಭಯದಿಂದಾಗಿ ಅವಳು ಏನು ಮಾಡಿದರೂ ನಾವು ಕಣ್ಣು ತೆರೆಯುವುದಿಲ್ಲ ಎಂದು 6ನೇ ತರಗತಿ ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದಾಳೆ.
Advertisement
ಕೆಲವು ಬಾರಿ ಮಧ್ಯರಾತ್ರಿ ನಮ್ಮ ವಾರ್ಡನ್ ಒಂದಿಷ್ಟು ಹುಡುಗಿಯರನ್ನು ವಸತಿ ಶಾಲೆಯ ಆವರಣದಿಂದ ಹೊರಗೆ ಕರೆದಿಕೊಂಡು ಹೋಗಿದ್ದಾಳೆ. ನನ್ನ ಕೋಣೆಗೂ ಬಂದು ಅಸಭ್ಯವಾಗಿ ಸ್ಪರ್ಶಿಸುತ್ತಾಳೆ. ಆದರೆ, ನಾನು ನಿದ್ದೆಗೆ ಜಾರಿದಂತೆ ನಟಿಸುತ್ತೇನೆ ಎಂದು 8ನೇ ತರಗತಿಯ ವಿದ್ಯಾರ್ಥಿನಿ ಪತ್ರದಲ್ಲಿ ವಿವರಿಸಿದ್ದಾಳೆ.
Advertisement
ಈ ಹಿಂದೆ ಕೆಲವು ವಿದ್ಯಾರ್ಥಿನಿಯರ ಪೋಷಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಎಫ್‍ಐಆರ್ ಅನ್ನು ದಾಖಲಿಸಿಕೊಂಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ಈ ಶಾಲೆಯಲ್ಲಿ 6, 7, 8ನೇ ತರಗತಿಯ ಒಟ್ಟು 100 ವಿದ್ಯಾರ್ಥಿನಿಯರಿದ್ದು, ಇಬ್ಬರು ಶಿಕ್ಷಕರು ಹಾಗೂ ಒಬ್ಬ ವಾರ್ಡನ್ ಇದ್ದಾರೆ. ವಸತಿ ಶಾಲೆಯಲ್ಲಿ ಮೂರು ವಿಶಾಲ ಕೋಣೆಗಳಿದ್ದು, ಪ್ರತಿ ಕೋಣೆಯಲ್ಲಿ 20 ಹಾಸಿಗೆಗಳಿವೆ. ಒಂದು ಬೆಡ್ ಮೇಲೆ ಇಬ್ಬರು ವಿದ್ಯಾರ್ಥಿನಿಯರು ಮಲಗುತ್ತಾರೆ. ನಿಯಮಾವಳಿಗಳ ಪ್ರಕಾರ, ಪ್ರತಿ ಕೋಣೆಯಲ್ಲಿ ವಿದ್ಯಾರ್ಥಿನಿಯರ ಜೊತೆಗೆ ಒಬ್ಬ ಶಿಕ್ಷಕಿ ಮಲಗಬೇಕು. ಆದರೆ ಇಲ್ಲಿ ಈ ನಿಯಮವನ್ನು ಉಲ್ಲಂಘಿಸಲಾಗಿದೆ.
ಮೊದಲ ಬಾರಿ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕಸ್ತೂರಬಾ ವಸತಿ ಶಾಲೆಯ ಜಿಲ್ಲಾ ಸಂಯೋಜಕರು ಹಾಗೂ ಬ್ಲಾಕ್ ಶಿಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವರದಿ ಸಲ್ಲಿಸಿದ ತಕ್ಷಣ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸತೇಂದ್ರ ಕುಮಾರ್ ಹೇಳಿದ್ದಾರೆ.