ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಕ್ಫ್ ಆಸ್ತಿ ವಿವಾದ ಜೋರಾಗುತ್ತಿದೆ. ರೈತರ ಜಮೀನು, ಹಿಂದೂ ದೇಗುಲದ ಬಳಿಕ ಸರ್ಕಾರಿ ಶಾಲೆ ಜಾಗ (Government School Land) ಮೇಲೂ ವಕ್ಫ್ ಬೋರ್ಡ್ ಕಣ್ಣಿಟ್ಟಂತೆ ಕಾಣುತ್ತಿದೆ.
ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಶಾಲೆ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ (Waqf Property) ಎಂದು ನಮೂದಾಗಿದೆ. ಸರ್ವೆ ನಂ.215ರ 30 ಗುಂಟೆ ಜಾಗದಲ್ಲಿ ಸರ್ಕಾರಿ ಶಾಲೆ ಇದೆ. ಈ ಶಾಲೆಯ ಜಾಗದ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ನಮೂದಾಗಿದೆ. ಸರ್ಕಾರಿ ಶಾಲೆ ಜಾಗ ಕಬಳಿಕೆಗೆ ಮುಂದಾದ ವಕ್ಫ್ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧ ಕಿಡಿ ಕಾರಿ ರಾಜ್ಯದ ವಕ್ಫ್ ಮಂಡಳಿ ವಜಾಗೊಳಿಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಕ್ಕರೆ ನಾಡಿಗೂ ಕಾಲಿಟ್ಟ ವಕ್ಫ್ ವಿವಾದ – ಮಂಡ್ಯದಲ್ಲಿ ದೇವಸ್ಥಾನವೇ ವಕ್ಫ್ ಆಸ್ತಿ
ಚಿಕ್ಕಮ ದೇವಿ ದೇವಸ್ಥಾನದ ಮೇಲೂ ವಕ್ಫ್ ಕಣ್ಣು:
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಎಂಬ ಗ್ರಾಮದಲ್ಲಿ 6 ಗುಂಟೆ ವ್ಯಾಪ್ತಿಯಲ್ಲಿ ಚಿಕ್ಕಮ್ಮ ದೇವಿ ಎಂಬ ದೇವಸ್ಥಾನ ಇದೆ. ಹಲವು ವರ್ಷಗಳ ಹಿಂದೆಯೇ ಈ ದೇವಸ್ಥಾನ ಕಟ್ಟಿಸಿ ಈ ಗ್ರಾಮದ ಜನರು ಚಿಕ್ಕಮ್ಮ ದೇವಿಯನ್ನು ಪೂಜಿಸುತ್ತಾ ಬರುತ್ತಿದ್ದಾರೆ. 2023 ಜುಲೈ 17ರ ವರೆಗೆ ಈ ದೇವಸ್ಥಾನದ 6 ಗುಂಟೆ ಜಾಗದ ಆರ್‌ಟಿಸಿಯಲ್ಲಿ ಬಂಜರು ಎಂದು ಉಲ್ಲೇಖವಾಗಿದೆ, ಅಂದರೆ ಇದು ಸರ್ಕಾರಿ ಜಮೀನು ಎಂದರ್ಥ. ಇನ್ನೊಂದೆಡೆ ಸಾಗುವಳಿ ಕಾಲಂನಲ್ಲಿ ಚಿಕ್ಕಮ್ಮನ ದೇವಸ್ಥಾನ ಎಂದು ಹೆಸರಿತ್ತು. ಆದರೆ ಇದೀಗ ಈ ದೇವಸ್ಥಾನ ಹಾಗೂ ಜಾಗವನ್ನು ವಕ್ಫ್ ಆಸ್ತಿ ಎಂದು ಮಾಡಲಾಗಿದೆ.
2023 ಜುಲೈ 17ರಲ್ಲಿ ಕೋರ್ಟ್ ಆದೇಶ ಎಂದು ಪಾಂಡವಪುರ ಉಪವಿಭಾಗ ಅಧಿಕಾರಿ ದೇವಸ್ಥಾನದ ಜಾಗವನ್ನು ವಕ್ಛ್ ಆಸ್ತಿ ಎಂದು ಮ್ಯುಟೇಶನ್ ಮಾಡಿದ್ದಾರೆ. ಇದೀಗ ಈ ಗ್ರಾಮಸ್ಥರು ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಆಸ್ತಿಯ ವಿವಾದದ ನಂತರ ದೇವಸ್ಥಾನದ ಸರ್ವೇ ನಂಬರ್‌ನಲ್ಲಿ ಆರ್‌ಟಿಸಿ ನೋಡಿದಾಗ ಇದು ಬೆಳಕಿಗೆ ಬಂದಿದೆ. ಗ್ರಾಮಸ್ಥರ ಗಮನಕ್ಕೆ ಬಾರದೇ ಹಿಂದೂ ದೇವಸ್ಥಾನವನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿರೋದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನ ಹಳೆಯ ಕ್ರಸ್ಟ್‌ಗೇಟ್ ಮಾರಾಟ ಮಾಡಲು ಹುನ್ನಾರ
ಹಿಂದೂ ದೇವಸ್ಥಾನವನ್ನು ವಕ್ಫ್ ಆಸ್ತಿ ಎಂದು ಮಾಡುವ ಮೂಲಕ ಅಧಿಕಾರಿಗಳು ಬಹುದೊಡ್ಡ ವಂಚನೆ ಮಾಡಿದ್ದಾರೆ. ಇದೀಗ ಮಂಡ್ಯ ಜಿಲ್ಲಾಡಳಿತ ಇದನ್ನು ಹೇಗೆ ಸರಿಪಡಿಸುತ್ತೆ? ಜನರ ಆಕ್ರೋಶವನ್ನು ಹೇಗೆ ಕಡಿಮೆ ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.