ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷರಾಗಿರುವ ವೆಂಕಯ್ಯ ನಾಯ್ಡು ಅವರು ರಾಜ್ಯ ಸಭೆಯಲ್ಲಿ ಅಗಲಿದ ಸ್ನೇಹಿತನನ್ನು ನೆನೆದು ಕಣ್ಣೀರಿಟ್ಟರು. ರಾಜ್ಯಸಭೆಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ನಾಯ್ದು ಭಾವನಾತ್ಮಕ ಸೆಲೆಗೆ ಸಿಲುಕಿ ದುಃಖಿತರಾದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರನ್ನು ನೆನೆದು ನಾಯ್ದು ಅವರು ಕಣ್ಣೀರಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೈಪಾಲ್ ರೆಡ್ಡಿ ಉತ್ತಮ ಸಂಸದೀಯ ಪಟುವಾಗಿದ್ದು, ಅತ್ಯುತ್ತಮ ವಾಗ್ಮಿಯಾಗಿದ್ದರು. 70ರ ದಶಕದಲ್ಲಿ ಆಂಧ್ರ ವಿಧಾನಸಭೆಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ. ಸದನ 8 ಗಂಟೆಗೆ ಇದ್ದರೆ, 7 ಗಂಟೆಗೆ ಉಪಾಹಾರಕ್ಕೆ ಹಾಜರಾಗುತ್ತಿದ್ದ ನಾವು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವು. ಜನರ ಸಮಸ್ಯೆಗಳ ಬಗ್ಗೆ ತಮ್ಮದೇ ರೀತಿಯಲ್ಲಿ ವಾದಿಸುತ್ತಿದ್ದೆವು ಎಂದು ಸ್ಮರಿಸಿಕೊಂಡರು.
Telangana: Vice President M Venkaiah Naidu pays last respect to senior Congress leader and former Union Minister #JaipalReddy at the latter’s residence, in Hyderabad. Jaipal Reddy passed away today at the age of 77. pic.twitter.com/MklhauGA0D
— ANI (@ANI) July 28, 2019
ಜೈಪಾಲ್ ರೆಡ್ಡಿ ನನಗಿಂತ 6 ವರ್ಷ ಚಿಕ್ಕವರಾಗಿದ್ದು, ಅವರು ನನಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಿಧನ ತೀವ್ರ ದುಃಖ ತಂದಿದೆ. ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ವೆಂಕಯ್ಯ ನಾಯ್ಡು ಅವರು ಹೇಳಿದರು.
ಹೈದರಾಬಾದಿನ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ 77 ವರ್ಷದ ಜೈಪಾಲ್ ರೆಡ್ಡಿ ನಿಧನರಾಗಿದ್ದರು. ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜೈಪಾಲ್ ರೆಡ್ಡಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಅವರು 2 ಬಾರಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಅಜಾತಶತ್ರು, ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಜೈಪಾಲ್ ರೆಡ್ಡಿ ಅಂತ್ಯಕ್ರಿಯೆ ಹೈದರಾಬಾದ್‍ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನೆಕ್ಲೆಸ್ ರೋಡ್‍ನ ಪಿವಿ ಘಾಟ್‍ನಲ್ಲಿ ಜೈಪಾಲ್ ರೆಡ್ಡಿ ಅಂತ್ಯಕ್ರಿಯೆಯನ್ನು ಪುತ್ರ ಅರವಿಂದ್ ರೆಡ್ಡಿ ನೆರವೇರಿಸಿದರು. ಇದಕ್ಕೂ ಮುನ್ನ ಜೈಪಾಲ್ ರೆಡ್ಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಗಣ್ಯರ ದಂಡೇ ಹರಿದುಬಂದಿತ್ತು. ಸಿದ್ದರಾಮಯ್ಯ, ರಮೇಶ್ ಕುಮಾರ್, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ನಾಯಕರು ಜೈಪಾಲ್ ರೆಡ್ಡಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ: ಜೈಪಾಲ್ ರೆಡ್ಡಿಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್