ಬೆಳಗಾವಿ: ಕಾಂಗ್ರೆಸ್ ಪರ ಮತ ಕೇಳಿದ ಬೆನ್ನಲ್ಲೇ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ನೋಡಬೇಡಿ. ನನ್ನ ನೋಡಿ ಮತಹಾಕಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರಚಾರದ ವೇಳೆ ಮಮದಾಪುರದ ಜಾಮಿಯಾ ಮಸೀದಿ ಎದುರು ನಿಂತಿದ್ದ ಮುಖಂಡರ ಬಳಿ ಒಳಗೆ ಬರಲೋ ಬೇಡ್ವೋ ಅಂತ ಕೇಳಿ ನಂತರ ನಗುತ್ತಾ ಮಸೀದಿಯೊಳಗೆ ತೆರಳಿದರು. ಆ ಬಳಿಕ ಬಿಜೆಪಿ ನೋಡಬೇಡಿ. ನನ್ನ ನೋಡಿ ಮತಹಾಕಿ ಎಂದು ಮುಸ್ಲಿಮರಲ್ಲಿ ಕೇಳಿಕೊಂಡರು.
ಡಿಸೆಂಬರ್ 5ಕ್ಕೆ ಗೋಕಾಕ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಇಂದಿನಿಂದ ಪ್ರಚಾಯ ಕಾರ್ಯ ಆರಂಭಿಸಿದರು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಏಕಾಂಗಿಯಾಗಿ ಭರ್ಜರಿ ಪ್ರಚಾರ ಮಾಡುತ್ತಿರುವ ರಮೇಶ್ ಜಾರಕಿಹೊಳಿ, ಪ್ರಚಾರಕ್ಕೂ ಮುನ್ನ ಟೆಂಪಲ್ ರನ್ ಮಾಡಿದರು. ಬಿಜೆಪಿ ಸೇರಿ ಇದೇ ಮೊದಲ ಬಾರಿ ಮಮದಾಪುರಕ್ಕೆ ರಮೇಶ್ ಆಗಮಿಸಿದ್ದರಿಂದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಸಾಹುಕಾರ್ ಅವರಿಗೆ 50 ಮಂದಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪರ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಸಾಹುಕಾರ್
ಗ್ರಾಮದ ಚರಮೂರ್ತೀಶ್ವರ ದೇವಸ್ಥಾನದಲ್ಲಿ ಪೂಜೆ, ಮಾರುತಿ ದೇವಸ್ಥಾನ, ಬಸವೇಶ್ವರ ದೇವಸ್ಥಾನ ಸೇರಿ ಗ್ರಾಮದ ಎಲ್ಲ ದೇವಾಲಯದಲ್ಲಿ ರಮೇಶ್ ಜಾರಕಿಹೊಳಿ ಪೂಜೆ ಸಲ್ಲಿಸಿದರು. ನಂತರ ಗ್ರಾಮದಲ್ಲಿ ಪಾದಯಾತ್ರೆ ಮಾಡುತ್ತಾ ಭರ್ಜರಿ ಮತಯಾಚನೆ ಮಾಡಿದ್ದು, ಸಾಹುಕಾರ್ ಗೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.