ಬಳ್ಳಾರಿ: ಶಾಸಕ ಗಾಲಿ ಜನಾರ್ದನ ರೆಡ್ಡಿಯವರ ನಿವಾಸದ ಕಡೆಗೆ ಸತೀಶ್ ರೆಡ್ಡಿಯವರ ಖಾಸಗಿ ಗನ್ ಮ್ಯಾನ್ ಗಳಿಂದ ನೇರ ಗುಂಡಿನ ದಾಳಿಯ ದೃಶ್ಯ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಖಾಸಗಿ ಗನ್ ಮ್ಯಾನ್‌ಗಳು ಜನಾರ್ಧನರೆಡ್ಡಿ ಮನೆ ಕಡೆ ಗುರಿಯಾಗಿಸಿ ಫೈರ್ ಮಾಡಿದ್ದಾರೆ. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜ.1 ರಂದು ಜನಾರ್ದನ ರೆಡ್ಡಿ (Janardhana Reddy) ಮನೆ ಮುಂದೆ ನಡೆದ ಬ್ಯಾನರ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಕಾಂಗ್ರೆಸ್‌ನ (Congress) ಕಾರ್ಯಕರ್ತ, ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ರಾಜಶೇಖರ್ ಮೃತಪಟ್ಟಿದ್ದ. ಕಾಂಗ್ರೆಸ್ ಕಾರ್ಯಕರ್ತನಿಗೆ ಗುಂಡು ಹಾರಿಸಿದವರು ಯಾರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಇದನ್ನೂ ಓದಿ: ಬ್ಯಾನರ್ ಗಲಾಟೆ – ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 11 ಜನರ ವಿರುದ್ಧ FIR
ಜನವರಿ 3 ರಂದು ವಾಲ್ಮೀಕಿ ಪುತ್ಥಳಿ ಅನಾವರಣ (Valmiki Statue Inauguration) ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿಯ ಹವಂಬಾವಿ ನಗರದಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್ ಅಳವಡಿಕೆ ಮಾಡಲು ಒಂದು ಗುಂಪು ಮುಂದಾಗಿತ್ತು. ಈ ವೇಳೆ ಬ್ಯಾನರ್ ಹಾಕದಂತೆ ರೆಡ್ಡಿ ಅಪ್ತರು ಅಡ್ಡಿ ಪಡಿಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಪರಸ್ಪರ ಕಲ್ಲು ತೂರಿದ್ದರು. ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಗುಂಡಿನ ದಾಳಿ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದ ಬಳಿಕ ಪೊಲೀಸರು ರೆಡ್ಡಿ ಮನೆಯ ಬಳಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಈ ಬಗ್ಗೆ ನಾರಾ ಭರತ್ ರೆಡ್ಡಿ ಪ್ರತಿಕ್ರಿಯಿಸಿ, ಜನಾರ್ದನ ರೆಡ್ಡಿ ಬೆಂಬಲಿಗರ ಮಾಡಿದ ಗಲಾಟೆಯಲ್ಲಿ ನಮ್ಮ ಕಾರ್ಯಕರ್ತ ಮೃತಪಟ್ಟಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ ಮತ್ತು ಬೆಂಬಲಿಗರನ್ನು ಕೂಡಲೇ ಬಂಧಿಸಬೇಕು. ವಾಲ್ಮೀಖಿ ಕಾರ್ಯಕ್ರಮವನ್ನು ತಡೆಯಲು ಕಳೆದ 1 ತಿಂಗಳಿನಿಂದ ಇವರು ಬಹಳ ಪ್ರಯತ್ನ ಪಡುತ್ತಿದ್ದರು. ಈಗ ಗಲಾಟೆ ಮಾಡುವ ಮೂಲಕ ಕಾರ್ಯಕ್ರಮ ನಿಲ್ಲಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
ಶ್ರೀರಾಮುಲು ಪ್ರತಿಕ್ರಿಯಿಸಿ, ಗುಂಡಿನ ದಾಳಿಯನ್ನು ನಾವು ಯಾರು ಮಾಡಿಲ್ಲ. ಜನಾರ್ದನ ರೆಡ್ಡಿ ಮತ್ತು ನನಗೆ ಸರ್ಕಾರವೇ ಗನ್ ಮ್ಯಾನ್ ನೀಡಿದೆ. ಅವರು ಯಾರು ಫೈರ್ ಮಾಡಿಲ್ಲ. ಇಂದು ತಂತ್ರಜ್ಞಾನದಲ್ಲಿ ಯಾವ ಗನ್‌ನಿಂದ ಬುಲೆಟ್ ಹಾರಿದೆ ಎನ್ನುವುದು ಗೊತ್ತಾಗುತ್ತದೆ. ಆ ಬುಲೆಟ್‌ನ್ನು ವಿಧಿವಿಜ್ಞಾನ ಲ್ಯಾಬ್‌ಗೆ ಕಳುಹಿಸಿ ಕಂಡು ಹಿಡಿಯಲಿ. ನಮ್ಮ ಕಡೆಯಿಂದ ಯಾರು ಫೈರ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ನೀವು ರಸ್ತೆಯಲ್ಲಿ ಎಲ್ಲಿ ಬೇಕಾದರೂ ಬ್ಯಾನರ್ ಕಟ್ಟಿಕೊಳ್ಳಿ. ಆದರೆ ನಮ್ಮ ಮನೆಯ ಮುಂದೆ ಬ್ಯಾನರ್ ಕಟ್ಟಿದರೆ ಸಂಚಾರಕ್ಕೆ ಸಮಸ್ಯೆ ಆಗುತ್ತದೆ ಎಂದು ನಾವು ಮೊದಲೇ ಅವರಿಗೆ ಹೇಳಿದ್ದೆವು. ಆದರೆ ಅದನ್ನು ಮೀರಿ ಅವರು ನಮ್ಮ ಮನೆಯ ಮುಂದೆಯೇ ಕಟ್ಟಿದ್ದಾರೆ. ನಾವು ರಾಜಕಾರಣ ಮಾಡುತ್ತೇವೆ. ಆದರೆ ನಮ್ಮ ವಿರೋಧ ಪಕ್ಷದವರ ಮನೆಯ ಮುಂದೆ ಹೋಗಿ ಗಲಾಟೆ ಮಾಡುವುದಿಲ್ಲ. ಆದರೆ ಅವರು ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿದ್ದಾರೆ ಅಷ್ಟೇ ಅಲ್ಲದೇ ಚಯರ್ ಹಾಕಿ ಕುಳಿತು ರೌಡಿಗಳ ರೀತಿ ವರ್ತನೆ ಮಾಡಿದ್ದಾರೆ ಎಂದು ದೂರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಜ ಜನಾರ್ದನ ರೆಡ್ಡಿ, ನಾನು ಕಾರಿನಿಂದ ಬಂದು ಇಳಿದ ಕೂಡಲೇ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ನಾಲ್ಕಾರ್ ರೌಂಡ್ ಫೈರ್ ಮಾಡಿದ್ದಾರೆ. ನನ್ನ ಹತ್ಯೆ ಮಾಡಲೆಂದೇ ಇಲ್ಲಿ ಗಲಾಟೆ ಮಾಡಿದ್ದಾರೆ ಎಂದು ದೂರಿ ಫೈರ್ ಮಾಡಿದ ಬುಲೆಟ್ ಅನ್ನು ಪ್ರದರ್ಶಿಸಿದ್ದರು. ಇದನ್ನೂ ಓದಿ: Ballari Firing Case | ತನಿಖೆ ನಡೆಯುತ್ತಿದೆ, ಯಾರನ್ನೂ ಬಿಡಲ್ಲ – ಸಚಿವ ಜಮೀರ್ ವಾರ್ನಿಂಗ್

