ಮೇರುನಟ ವಿಷ್ಣುವರ್ಧನ್ (Vishnuvardhan) ಅವರ 14ನೇ ಪುಣ್ಯಸ್ಮರಣೆಯನ್ನು (Punyasmarane) ಅವರ ಅಭಿಮಾನಿಗಳು ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ರಕ್ತದಾನ, ಅನ್ನದಾನದಂತಹ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ (Abhimana Studio) ವಿಷ್ಣು ಸಮಾಧಿ ಬಳಿ ಮಹಿಳಾ ಅಭಿಮಾನಿಗಳು ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಾವಿರಾರು ದೀಪಗಳನ್ನು ಹಚ್ಚುವ ಮೂಲಕ ಅಗಲಿದ ನಟನ ಸ್ಮರಣೆಯನ್ನು ಮಾಡಿದರು. ಇಂದು ಬೆಳಗ್ಗೆಯಿಂದ ಸಾವಿರಾರು ಅಭಿಮಾನಿಗಳು ಅಭಿಮಾನ ಸ್ಟುಡಿಯೋಗೆ ಹರಿದು ಬಂದಿದ್ದಾರೆ.
ಬೆಳಗ್ಗೆ ಹತ್ತು ಗಂಟೆಗೆ ಡಾ.ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಮತ್ತು ಅಭಿಮಾನಿಗಳು ಪೂಜೆ ಸಲ್ಲಿಸಿದರು. ಜೊತೆಗೆ ವಿಷ್ಣುವರ್ಧನ್ ನೆನಪಿನಲ್ಲಿ ಕ್ಯಾಲೆಂಡರ್ ಮತ್ತು ಮೇರುನಟ ಪುಸ್ತಕ ಬಿಡುಗಡೆ ಆದವು. ವಿಷ್ಣುವರ್ಧನ್ ಅವರ ನೆಚ್ಚಿನ ಗೀತೆಗಳನ್ನು ಹಾಡುವ ಮೂಲಕ ಗೀತ ನಮನ ಸಲ್ಲಿಸಲಾಗಿದೆ.
ಮೈಸೂರಿನಲ್ಲಿರುವ ವಿಷ್ಣು ಸ್ಮಾರಕದ ಬಳಿಯೂ ವಿಷ್ಣು ಕುಟುಂಬ ಪೂಜೆ ಸಲ್ಲಿಸಿದೆ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಸೇರಿದಂತೆ ಕುಟುಂಬದ ಹಲವು ಸದಸ್ಯರು ಭಾಗಿಯಾಗಿದ್ದಾರೆ.