ಪಡ್ಡೆಹುಲಿ ಚಿತ್ರದ ಮೂಲಕ ಗಮನ ಸೆಳೆದಿದ್ದ ಶ್ರೇಯಸ್ ಮಂಜು (Shreyas Manju) ಇದೀಗ ವಿಷ್ಣುಪ್ರಿಯ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈಗಾಗಲೇ ಮಾಧುರ್ಯ ಬೆರೆತ ಹಾಡುಗಳ ಮೂಲಕ ಸದ್ದು ಮಾಡಿದ್ದ ಈ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಜಿ.ಟಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿ, ನಾಯಕ ನಟ ಶ್ರೇಯಸ್ ಮಂಜು ಸೇರಿದಂತೆ ಒಂದಿಡೀ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿರುವ ವಿಷ್ಣುಪ್ರಿಯ (Vishnu Priya) ಚಿತ್ರ ಫೆಬ್ರವರಿ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ಇದು ವಿ.ಕೆ ಪ್ರಕಾಶ್ ನಿರ್ದೇಶನದಲ್ಲಿ ರೂಪುಗೊಂಡಿರುವ ಚಿತ್ರ. ಶ್ರೇಯಸ್ ಮಂಜು ಈ ಹಿಂದೆ ಪಡ್ಡೆಹುಲಿ ಚಿತ್ರದಲ್ಲಿ ಮಾಸ್ ಲುಕ್ಕಿನಲ್ಲಿ ಮಿಂಚಿದ್ದವರು. ಈ ಕಾರಣದಿಂದಲೇ ಅಂಥಾದ್ದೇ ನಿರೀಕ್ಷೆಯಿಟ್ಟುಕೊಂಡಿದ್ದವರನ್ನು ನವಿರು ಪ್ರೇಮದ ಹಾಡುಗಳು ಎದುರುಗೊಂಡಿದ್ದವು. ಇದೀಗ ಬಿಡುಗಡೆಗೊಂಡಿರುವ ಟ್ರೈಲರಿನಲ್ಲಿಯೂ ಹಾಡಿನಲ್ಲಿ ಕಾಣಿಸಿಕೊಂಡಿದ್ದ ತಾಜಾತನವೇ ಹಬ್ಬಿಕೊಂಡಿದೆ. ಅದರ ನಡುವಲ್ಲಿಯೇ ಬೇರೆ ಬೇರೆ ದಿಕ್ಕಿನತ್ತ ಕುತೂಹಲದ ಕಣ್ಣಿಡುವಂಥಾ ಸೂಕ್ಷ್ಮಗಳೂ ಜಾಹೀರಾಗಿವೆ. ಅಂತೂ ಪಕ್ಕಾ ಮಾಸ್ ಸೇರಿದಂತೆ ಎಲ್ಲ ಅಂಶಗಳನ್ನು ಬೆರೆಸಿಯೇ ವಿಷ್ಣುಪ್ರಿಯಾ ಸಿನಿಮಾ ತಯಾರಾಗಿರೋದರ ಸ್ಪಷ್ಟ ಛಾಯೆ ಈ ಟ್ರೈಲರ್ ಮೂಲಕ ಗೋಚರಿಸಿದೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್- ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಕೂಡಾ ಬೇರೆಯದ್ದೇ ಧಾಟಿಯ ಕಥನಗಳತ್ತ ಹೊರಳಿಕೊಂಡಿದೆ. ಇಂಥಾ ಭರಾಟೆಯಲ್ಲಿ ಪಕ್ಕಾ ಪ್ರೀತಿಯ ಸುತ್ತಲೇ ಕೇಂದ್ರಿತವಾದ ಕಥೆಗಾಗಿ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾದಿದ್ದರು. ಅಂಥವರನ್ನೆಲ್ಲ ಈ ಟ್ರೈಲರ್ ಅಕ್ಷರಶಃ ಥ್ರಿಲ್ ಆಗಿಸಿದೆ. ಹಾಗಂತ ಬರೀ ಪ್ರೇಮವೇ ಈ ಸಿನಿಮಾದ ಜೀವಾಳವಲ್ಲ, ಸಾಕಷ್ಟು ಟ್ವಿಸ್ಟುಗಳು, ಪ್ರೀತಿಯಾಚೆಗಿನ ಅಂಶಗಳಿದ್ದಾವೆಂಬ ವಿಚಾರವನ್ನು ಈ ಟ್ರೈಲರ್ ಸ್ವಷ್ಟವಾಗಿಯೇ ಪ್ರೇಕ್ಷಕರತ್ತ ರವಾನಿಸಿದೆ. ಈ ವರ್ಷದ ಮೊದಲ ಭಾಗದಲ್ಲಿಯೇ ಥರ ಥರದ ಕಂಟೆಂಟಿನ ಸಿನಿಮಾಗಳು ಸರತಿಯಲ್ಲಿ ನಿಂತಿವೆ. ಆ ಸಾಲಿನಲ್ಲಿರುವ, ವಾರದೊಪ್ಪತ್ತಿನಲ್ಲಿ ಬಿಡುಗಡೆಗೊಂಡಿರುವ ವಿಷ್ಣುಪ್ರಿಯ ಪ್ರೇಕ್ಷಕರಲ್ಲೀಗ ಬೇರೊಂದು ಮಟ್ಟದ ನಿರೀಕ್ಷೆ ಹುಟ್ಟುಹಾಕುವಲ್ಲಿ ಯಶ ಕಂಡಿದೆ.
ಕೆ.ಮಂಜು ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ವಿ.ಕೆ ಪ್ರಕಾಶ್ ಒಂದೊಳ್ಳೆ ಕಥೆಯ ಮೂಲಕ ಈ ಚಿತ್ರವನ್ನು ರೂಪಿಸಿದ್ದಾರಂತೆ. ಅದೆಂಥಾ ಸಿನಿಮಾಗಳು ಬಂದರೂ ಪ್ರೇಮ ಕಥನಗಳತ್ತ ತುಡಿಯುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಕೇವಲ ಆ ಬಗೆಯ ಪ್ರೇಕ್ಷಕರನ್ನು ಮಾತ್ರವಲ್ಲದೆ ಎಲ್ಲ ವರ್ಗಗಳ ಸಿನಿಮಾ ಪ್ರೇಮಿಗಳನ್ನೂ ಸೆಳೆಯುವಂತೆ ವಿಷ್ಣುಪ್ರಿಯಾ ರೂಪುಗೊಂಡಿದೆಯಂತೆ. ಅದರ ನಿಖರ ಸೂಚನೆ ಈಗ ಬಿಡುಗಡೆಗೊಂಡಿರುವ ಟ್ರೈಲರ್‌ನಲ್ಲಿದೆ. ಇಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಶ್ರೇಯಸ್ ಅವರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಅಚ್ಯುತ್ ರಾವ್, ಸುಚೇಂದ್ರ ಪ್ರಸಾದ್, ನಿಹಾಲ್ ರಾಜ್ ಮುಂತಾದವರ ತಾರಾಗಣವಿದೆ. ವಿನೋದ್ ಭಾರತಿ ಛಾಯಾಗ್ರಹಣ, ಗೋಪಿ ಸುಂದರ್ ಸಂಗೀತ ನಿರ್ದೇಶನ, ಸುರೇಶ್ ಅರಸ್ ಸಂಕಲನವಿರುವ ವಿಷ್ಣುಪ್ರಿಯ ಚಿತ್ರ ಫೆಬ್ರವರಿ 21ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ: ಉದ್ಯಮಿ ಜೊತೆ ಮದುವೆಯಾದ ‘ದಿ ಗೋಟ್’ ಚಿತ್ರದ ನಟಿ ಪಾರ್ವತಿ ನಾಯರ್