ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಅವರು ನಡೆಸುತ್ತಿದ್ದ ಹಲವಾರು ಸಮಾಜಮುಖಿ ಕಾರ್ಯಗಳ ನಡುವೆ ಒಂದೂವರೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದರು. ಆದರೆ ಅವರ ನಿಧನದ ಬಳಿಕ ಈ ಮಕ್ಕಳ ಜವಾಬ್ದಾರಿಯನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. ಇದೀಗ ಪುನೀತ್ ಅವರ ಆತ್ಮೀಯ ಗೆಳೆಯ ಕಾಲಿವುಡ್ ನಟ ವಿಶಾಲ್ ಅಷ್ಟು ಮಕ್ಕಳ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಹೌದು, ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪುನೀತ್ ಒಳ್ಳೆಯ ನಟ ಮಾತ್ರ ಅಲ್ಲ, ಒಳ್ಳೆಯ ಸ್ನೇಹಿತ, ಒಳ್ಳೆಯ ವ್ಯಕ್ತಿ. ಇಂದು ನಮ್ಮ ನಡುವೆ ಅವರಿಲ್ಲ ಅನ್ನೋದನ್ನು ಇನ್ನೂ ಊಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಆಗಿಲ್ಲ. ಅವರ ಸಾವು ಚಿತ್ರರಂಗಕ್ಕಷ್ಟೇ ಅಲ್ಲ ಸಮಾಜಕ್ಕೆ, ಕುಟುಂಬಕ್ಕೆ ಹಾಗೂ ಅವರ ಜೊತೆ ಇದ್ದವರಿಗೆ ದೊಡ್ಡ ನಷ್ಟ. ಇದನ್ನೂ ಓದಿ: ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ
ಪುನೀತ್ 1,800 ಮಕ್ಕಳಿಗೆ ಉಚಿತ ಶಿಕ್ಷಣ, ಅನಾಥಶ್ರಮ, ವೃದ್ಧಾಶ್ರಮ ನಡೆಸುವುದರ ಜೊತೆಗೆ ತಮ್ಮ ಸಾವಿನ ಬಳಿಕವೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದನ್ನೆಲ್ಲ ನೆನೆಸಿಕೊಳ್ಳುವಾಗ, ಪುನೀತ್ ಇಲ್ಲ ಅನ್ನೋದನ್ನು ನಂಬಲು ಆಗುತ್ತಿಲ್ಲ. ಪುನೀತ್ ಅಂತಹ ಬಹುಮುಖ ನಟನನ್ನು ನಾವು ಕಳೆದುಕೊಂಡಿದ್ದೇವೆ. ಪುನೀತ್‍ನನ್ನು ನೋಡಿದಾಗ, ಪುನೀತ್‍ನನ್ನು ನೆನಪಿಸಿಕೊಂಡಾಗ ನನ್ನ ಮನಸ್ಸಿಗೆ ಒಂದು ವಿಷಯ ಬಂತು. ನಿನ್ನ ಗೆಳೆಯನಾಗಿ ಮಾತು ಕೊಡುತ್ತಿದ್ದೇನೆ. ಆ 1,800 ಮಕ್ಕಳಿಗೆ ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ. ಮುಂದಿನ ವರ್ಷದಿಂದ ನಿಮ್ಮ ಫೌಂಡೇಷನ್, ನಿಮ್ಮ ಸಮಾಜಸೇವೆಯನ್ನು ನಾನು ಮುಂದುವರೆಸುತ್ತೇನೆ ಅಂತ ಭರವಸೆ ನೀಡಿದ್ದಾರೆ.
ಅಪ್ಪು 1,800 ಮಕ್ಕಳನ್ನು ಓದಿಸುತ್ತಿದ್ದರು. ಅಪ್ಪು ಅಗಲಿಕೆ ಬಳಿಕ ಆ ಮಕ್ಕಳ ಗತಿ ಏನು ಎಂಬ ಕೊರಗೂ ಎಲ್ಲರನ್ನೂ ಕಾಡಿತ್ತು. ಆದರೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಇದೀಗ ತಮಿಳು ನಟ ವಿಶಾಲ್, ಪುನೀತ್ ನಿರ್ವಹಿಸುತ್ತಿದ್ದ ಜವಾಬ್ದಾರಿ ಹೊರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’