ಅಹಮದಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಗಳೇ ಇಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುತ್ತಾರೆ ಅಂತ ಅಭಿಮಾನಿ ನಿರೀಕ್ಷೆ ಹೊಂದಿದ್ದರು. ಐಪಿಎಲ್‍ನಲ್ಲಿ ಮಿಂಚಿದರೆ, ಉತ್ತಮ ಪ್ರದರ್ಶನ ನೀಡಿದರೆ ಐಸಿಸಿ ಟಿ20 ವಿಶ್ವಕಪ್‍ಗೆ ಧೋನಿ ಮರಳುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.
ಈ ನಡುವೆ ಧೋನಿ ಭವಿಷ್ಯದ ಬಗ್ಗೆ ವಿರೇಂದ್ರ ಸೆಹ್ವಾಗ್ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ಚೊಚ್ಚಲ ಟಿ20 ವಿಶ್ವಪಕ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್‍ಗಳನ್ನು ಗೆದ್ದು ಬೀಗಿತ್ತು. ಆದರೆ ಈಗ ಅವರಿಗೆ ಕಮ್‍ಬ್ಯಾಗ್ ಸಾಧ್ಯತೆಗಳೇ ಕಡಿಮೆ ಎಂದು ಸೆಹ್ವಾಗ್ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಅಹಮದಾಬಾದ್‍ನಲ್ಲಿ ಮಂಗಳವಾರ ಮಾತನಾಡಿದ ಅವರು, ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ಕೂಡ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಂಡದಿಂದ ಹೊರಹಾಕುವುದು ಕಷ್ಟ. ಎಂ.ಎಸ್.ಧೋನಿ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ನಡೆಯುವ ಬಗ್ಗೆಯೂ ಒಂದು ಅನುಮಾನ ವ್ಯಕ್ತವಾಗಿದೆ ಎಂದು ತಿಳಿಸಿದರು.
ರಾಜಕೀಯಕ್ಕೆ ಇಳಿಯುವುದಿಲ್ಲ:
ರಾಜಕೀಯಕ್ಕೆ ಸೇರುವ ಪ್ರಶ್ನೆಗೆ ಉತ್ತರಿಸಿದ ಸೆಹ್ವಾಗ್, ನಾನು ರಾಜಕೀಯಕ್ಕೆ ಕಾಲಿಡುವುದಿಲ್ಲ. ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರನ್ನು ಸಂಸದರಾಗಿದ್ದಾರೆ, ಅಷ್ಟು ಸಾಕು. ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮುಂಬರುವ ಸಮಯದಲ್ಲಿ ಉತ್ತಮ ಕೆಲಸವನ್ನು ಸಹ ತೋರಿಸುತ್ತಾರೆ. ತಂಡದ ನಾಯಕನಂತೆ ಐಪಿಎಲ್ ಟೂರ್ನಿ ನಡೆಸುವ ಬಗ್ಗೆ ಜಾಗರೂಕ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.