ನವದೆಹಲಿ: ಕ್ರಿಕೆಟ್‍ನ ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಎಲ್ಲಾ ದಾಖಲೆಯನ್ನು ಭಾರತದ ನಾಯಕ ವಿರಾಟ್ ಕೊಹ್ಲಿ ಮುರಿಯಬಹುದು. ಆದರೆ ಆ ಒಂದು ದಾಖಲೆಯನ್ನು ಮುರಿಯಲು ಕೊಹ್ಲಿ ಸೇರಿದಂತೆ ಯಾರು ಆಟಗಾರನಿಂದಲೂ ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಹೇಳಿದ್ದಾರೆ.
ಕ್ರಿಕೆಟ್‍ನ ಮೂರು ಮಾದರಿಯಲ್ಲೂ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ-20 ಸೇರಿದಂತೆ ಎಲ್ಲಾ ಮಾದರಿಯಲ್ಲೂ ಎಲ್ಲಾ ರೀತಿಯ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇಷ್ಟೆಲ್ಲ ದಾಖಲೆ ಬ್ರೇಕ್ ಮಾಡಿರುವ ಕೊಹ್ಲಿ, ಸಚಿನ್ ಅವರು ಮಾಡಿದ ಒಂದು ದಾಖಲೆಯನ್ನು ಮುರಿಯಲು ಆಗುವುದಿಲ್ಲ. ಸಚಿನ್ ಅವರು ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ದಾಖಲೆಯನ್ನು ಕೊಹ್ಲಿ ಸೇರಿದಂತೆ ವಿಶ್ವದ ಯಾವ ಆಟಗಾರನಿಂದ ಮುರಿಯಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.
ಸುದ್ದಿ ವಾಹಿನಿವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೆಹ್ವಾಗ್ ಅವರು, ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್. ಅವರು ಶತಕಗಳನ್ನು ಗಳಿಸುವ ರೀತಿ, ಅವರು ರನ್ ಗಳಿಸುವ ರೀತಿ ನೋಡಿದರೆ ಸಚಿನ್ ತೆಂಡೂಲ್ಕರ್ ಅವರ ಹೆಚ್ಚಿನ ದಾಖಲೆಗಳನ್ನು ಅವರು ಮುರಿಯುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ ಸಚಿನ್ ತೆಂಡೂಲ್ಕರ್ ಆಡಿದ 200 ಟೆಸ್ಟ್ ಪಂದ್ಯಗಳನ್ನು ಕೊಹ್ಲಿ ಸೇರಿ ಮತ್ತೆ ಯಾವ ಆಟಗಾರನಿಂದ ಮುರಿಯಲು ಸಾಧ್ಯವೇ ಇಲ್ಲ ಎಂದರು.
ಸಚಿನ್ ಅವರನ್ನು ಬಿಟ್ಟರೆ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ 168 ಟೆಸ್ಟ್ ಪಂದ್ಯಗಳನ್ನು ಆಡಿ ಎರಡನೇ ಸ್ಥಾನದಲ್ಲಿ ಇದ್ದಾರೆ. 2011 ಜೂನ್ 20 ರಂದು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಭಾರತದ ಪರವಾಗಿ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 25 ಶತಕಗಳೊಂದಿಗೆ 6,613 ರನ್ ಗಳಿಸಿದ್ದಾರೆ.
ಈಗ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿ ಅವರು, ಮೊದಲ ಪಂದ್ಯದಲ್ಲೇ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 9 ರನ್ ಗಳಿಸಿದ್ದ ವಿರಾಟ್ ವಿಂಡೀಸ್ ವೇಗಿ ಶಾನನ್ ಗೇಬ್ರಿಯಲ್ ವಿಕೆಟ್ ಒಪ್ಪಿಸಿದ್ದರು.