ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಮಹತ್ವದ ದಾಖಲೆಯನ್ನು ಮುರಿಯುವ ಸನಿಹದಲ್ಲಿ ಇದ್ದು, ವೆಸ್ಟ್ ಇಂಡೀಸ್ ವಿರುದ್ಧ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಲು 19 ರನ್ ಗಳ ಅಗತ್ಯವಿದೆ.
ಕೊಹ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 1912 ರನ್‍ಗಳನ್ನು ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಈ ದಾಖಲೆಯನ್ನ ಬರೆಯಲು ಕೊಹ್ಲಿ ಅವರಿಗೆ ಅವಕಾಶವಿದೆ. ಈ ಹಿಂದೆ ಪಾಕ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಅವರ ಹೆಸರಿನಲ್ಲಿ ಈ ದಾಖಲೆ ಇದ್ದು, ಒಟ್ಟು 1930 ರನ್ ಗಳನ್ನು ಜಾವೇದ್ ಗಳಿಸಿದ್ದಾರೆ.
Advertisement
Advertisement
ಜಾವೇದ್ 1930 ರನ್ ಗಳಿಸಲು 64 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದು, ಕೊಹ್ಲಿ 34ನೇ ಇನ್ನಿಂಗ್ಸ್ ನಲ್ಲಿ ದಾಖಲೆ ನಿರ್ಮಿಸುವ ಅವಕಾಶ ಪಡೆದಿದ್ದಾರೆ. ಇದುವರೆಗೂ ವಿಂಡೀಸ್ ವಿರುದ್ಧ ಕೊಹ್ಲಿ 7 ಶತಕ, 10 ಅರ್ಧ ಶತಕಗಳನ್ನ ಸಿಡಿಸಿದ್ದಾರೆ. ಆದರೆ ಜಾವೇದ್ ಕೇವಲ 1 ಶತಕ ಮಾತ್ರ ಸಿಡಿಸಿದ್ದರು. 1993 ರಲ್ಲಿ ಜಾವೇದ್ ತಮ್ಮ ಅಂತಿಮ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಸದ್ಯ 26 ವರ್ಷಗಳ ಬಳಿಕ ಈ ದಾಖಲೆಯನ್ನು ಮುರಿಯುವ ಅವಕಾಶ ಕೊಹ್ಲಿ ಅವರಿಗೆ ಲಭಿಸಿದೆ. ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಜಯ ಪಡೆದ ಕೊಹ್ಲಿ ಬಾಯ್ಸ್, ಏಕದಿನ ಟೂರ್ನಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.