ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಬಾರಿಗೆ ಟಾಪ್ 10ನಲ್ಲಿ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ನಲ್ಲಿ ಭಾರತದ ಪರ ಅತಿ ವೇಗವಾಗಿ 50 ವಿಕೆಟ್ ಪಡೆದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಮಂಗಳವಾರ ಬಿಡುಗಡೆಯಾದ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಟೀಂ ಇಂಡಿಯಾದ ರವೀಂದ್ರ ಜಡೇಜಾ 10ನೇ ಸ್ಥಾನ ಪಡೆದುಕೊಂಡಿದ್ದಾರೆ.
Advertisement
ಕಳೆದ ಬಾರಿ 15ನೇ ಸ್ಥಾನ ಪಡೆದಿದ್ದ ಬುಮ್ರಾ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಕೇವಲ 7 ರನ್ ನೀಡಿ, 5 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರ ಫಲವಾಗಿ ಬುಮ್ರಾ ಏಳನೇ ಸ್ಥಾನಕ್ಕೆ ನೆಗೆದಿದ್ದಾರೆ.
Advertisement
Advertisement
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 908 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾ ಬೌಲರ್ ಕಗಿಸೋ ರಬಾಡ 851 ಅಂಕ ಪಡೆದು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. 814 ಅಂಕ ಗಳಿಸಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಅಂಡರ್ಸನ್ ಮೂರನೇ ಸ್ಥಾನ, 813 ಅಂಕಗಳಿಂದ 4ನೇ ಸ್ಥಾನದಲ್ಲಿ ವೆರ್ನಾನ್ ಪಿಲಂಡರ್ ಪಡೆದಿದ್ದಾರೆ. ನ್ಯೂಜಿಲೆಂಡ್‍ನ ಟ್ರೆಂಟ್ ಬೌಲ್ಟ್ 793 ಅಂಕ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.
Advertisement
ಬ್ಯಾಟಿಂಗ್ ವಿಭಾಗ:
ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 910 ಅಂಕ ಪಡೆದು ಅಗ್ರ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ (904 ಅಂಕ) ಎರಡನೇ ಸ್ಥಾನ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರು ಹಾಗೂ ಟೀಂ ಇಂಡಿಯಾ ಆಟಗಾರ ಚೇತೇಶ್ವರ್ ಪೂಜಾರ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. 10 ಸ್ಥಾನಗಳ ಜಿಗಿತ ಕಂಡಿರುವ ಅಜಿಂಕ್ಯ ರಹಾನೆ ಈ ಬಾರಿ 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಆಲ್‍ರೌಂಡರ್ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಆಟಗಾರ ಜೇಸನ್ ಹೋಲ್ಡರ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಹಿಂದಿನ ಪಟ್ಟಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾ ವಿರುದ್ದ ಆ್ಯಶಸ್ ಸರಣಿಯಲ್ಲಿ ಅಜೇಯ 135 ರನ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಮತ್ತೆರೆಡು ಸ್ಥಾನ ಜಿಗಿದಿದ್ದಾರೆ.