Connect with us

Cricket

ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಕನಸು ಕಾಣುತ್ತಿದ್ದ ರಹಾನೆಯ ಕಾಲೆಳೆದ ಕೊಹ್ಲಿ, ಧವನ್

Published

on

ನವದೆಹಲಿ: ಕೋಲ್ಕತ್ತಾದಲ್ಲಿ ಮುಂಬರುವ ಹಗಲು-ರಾತ್ರಿ ಟೆಸ್ಟ್ ಬಗ್ಗೆ ಕನಸು ಕಾಣುತ್ತಿರುವ ಬಗ್ಗೆ ಸೋಮವಾರ ರಾತ್ರಿ ಫೋಟೋವೊಂದನ್ನು ಪೋಸ್ಟ್ ಮಾಡಿದ ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಆಟಗಾರ ಶಿಖರ್ ಧವನ್ ಅವರು ಟ್ರೋಲ್ ಮಾಡಿದ್ದಾರೆ.

ನವೆಂಬರ್ 22 ರಿಂದ 26 ರವರೆಗೆ ಬಾಂಗ್ಲಾದೇಶ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಉಭಯ ತಂಡಗಳು ಇತಿಹಾಸದಲ್ಲಿ ಮೊದಲ ಬಾರಿಗೆ ದೀಪಗಳ ಅಡಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿವೆ.

ಮೊದಲ ಹಗಲು ಮತ್ತು ರಾತ್ರಿ ಪಂದ್ಯವನ್ನು ಆಡಲು ಸಿದ್ಧವಾಗಿರುವ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಅವರು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪಿಂಕ್ ಬಾಲ್ ಪಕ್ಕದಲ್ಲಿ ಮಲಗಿರುವ ಫೋಟೋವನ್ನು ಹಾಕಿ, ನಾನು ಈಗಾಗಲೇ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಕನಸು ಕಾಣುತ್ತಿರುವೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಗೆ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರು ಕಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

ಶಿಖರ್ ಧವನ್,  ಕನಸಿನಲ್ಲಿಯೇ ಫೋಟೋ ತೆಗೆದುಕೊಂಡ ಎಂದು ಹೇಳುವ ಮೂಲಕ ರಹಾನೆ ಅವರನ್ನು ಕಾಲೆಳೆದರೆ, ಕೊಹ್ಲಿ ಅವರು ತುಂಬಾ ಒಳ್ಳೆಯ ಪೋಸ್ ಜಿಂಕ್ಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಬಹುನಿರೀಕ್ಷಿತ ಪಂದ್ಯವನ್ನು ಆಡಲು ನಾಯಕ ಕೊಹ್ಲಿ ಮತ್ತು ಉಪನಾಯಕ ರಹಾನೆ ಅವರು ತಂಡದ ಎಲ್ಲಾ ಆಟಗಾರಗಿಂತ ಮೊದಲೇ ಕೋಲ್ಕತ್ತಾಗೆ ಬಂದಿದ್ದಾರೆ. ಇಂದು ಬೆಳಗ್ಗೆ 9:40 ಸುಮಾರಿಗೆ ಕೊಹ್ಲಿ ಮತ್ತು ರಹಾನೆ ಕೋಲ್ಕತಾಗೆ ಬಂದಿದ್ದಾರೆ. ಇಂದು ನಾಯಕ ಕೊಹ್ಲಿ ಅವರು ಪಿಚ್ ನೋಡಲು ಈಡನ್ ಗಾರ್ಡನ್ಸ್ ಮೈದಾನಕ್ಕೆ ಹೋಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮೂಲಗಳ ಪ್ರಕಾರ ಕೊಹ್ಲಿ ಅವರು ಈ ಯೋಜನೆಯನ್ನು ಕೈಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ರೋಹಿತ್ ಶರ್ಮಾ ಅವರು ಬುಧವಾರ ನಸುಕಿನ ಜಾವ 1:55 ಕ್ಕೆ ಬರಲಿದ್ದರೆ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅದೇ ದಿನ ಬೆಳಿಗ್ಗೆ 9.35 ಕ್ಕೆ ಆಗಮಿಸಲಿದ್ದಾರೆ. ಆದರೆ ಶುಕ್ರವಾರ ಪಂದ್ಯ ಆರಂಭವಾಗುವರೆಗೂ ಪಿಚ್‍ನಲ್ಲಿ ಪಿಂಕ್ ಬಾಲ್‍ನಲ್ಲಿ ಅಭ್ಯಾಸ ಮಾಡಲು ಬಿಡುವುದಿಲ್ಲ ಎಂದು ಪಿಚ್ ಕ್ಯೂರೇಟರ್ ಸುಜನ್ ಮುಖರ್ಜಿ ಹೇಳಿದ್ದಾರೆ.

ಇಂದೋರ್ ನಲ್ಲಿ ನಡೆದ ಮೊದಲ ಪಂದ್ಯವನ್ನು ಇನ್ನಿಂಗ್ಸ್ ಮತ್ತು 130 ರನ್‍ಗಳಿಂದ ಭಾರತ ಗೆದ್ದಿದ್ದು ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Click to comment

Leave a Reply

Your email address will not be published. Required fields are marked *