ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

Public TV
1 Min Read
panchamasali protest

ಬೆಳಗಾವಿ: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಪಂಚಮಸಾಲಿ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

ಇಂದು ಮಧ್ಯಾಹ್ನ ಸುವರ್ಣ ಸೌಧ ಮುತ್ತಿಗೆ ಹಾಕಲು ಬಂದ ಹೋರಾಟಗಾರರನ್ನು ಪೊಲೀಸರು ದಾರಿಯಲ್ಲೇ ತಡೆದಿದ್ದಾರೆ. ಮುತ್ತಿಗೆ ಹಾಕಲು ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರೂ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ.

ಈ ವೇಳೆ ತಳ್ಳಾಟ ನೂಕಾಟ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ಬಿದ್ದಿದೆ. ಮ್ಮ ಮೇಲೆಯೇ ಕಲ್ಲುತೂರಿದ್ದಕ್ಕೆ ಸಿಟ್ಟಾದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾ ನಿರತರು ದಿಕ್ಕಾಪಾಲಾಗಿ ಓಡಿದ್ದಾರೆ.

 

ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಮಂಗಳವಾರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಪಂಚಮಸಾಲಿ ಸಮುದಾಯ ಮುಂದಾಗಿತ್ತು. ಬಸವಜಯ ಮೃತ್ಯುಂಜಯ ಸ್ವಾಮೀಜಿ ಡಿಸೆಂಬರ್​ 10 ರಂದು ಟ್ರ್ಯಾಕ್ಟರ್​ ಮೂಲಕ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಕರೆ ನೀಡಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರಣ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಪ್ರತಿಭಟನೆಯ ಉದ್ದೇಶದಿಂದ ಟ್ಯಾಕ್ಟರ್​ ​ ಹಾಗೂ ಇತರೆ ವಾಹನಗಳು ಬೆಳಗಾವಿ ನಗರಕ್ಕೆ ಬಾರದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಷರತ್ತು ವಿಧಿಸಿ ಜಿಲ್ಲಾಡಳಿತ ಪ್ರತಿಭಟನೆಗೆ ಅನುಮತಿ ನೀಡಿತ್ತು.

Share This Article