ಚೆನ್ನೈ: ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಯುವತಿ ಆತ್ಮಹತ್ಯೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ಸತ್ಯಭಾಮಾ ವಿಶ್ವವಿದ್ಯಾಲಯದಲ್ಲಿ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಧಾ ಮೌನಿಕ ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದಳು. ಸೋಮವಾರದಂದು ಆಕೆ ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಕಾರಣ ಪರೀಕ್ಷಾ ಮೇಲ್ವಿಚಾರಕರು ಆಕೆಯನ್ನು ಹೊರಗೆ ಕಳಿಸಿದ್ದರು. ಇತರೆ ಪರೀಕ್ಷೆಗೂ ಹಾಜರಾಗದಂತೆ ತಡೆದಿದ್ದರು ಎಂದು ವರದಿಯಾಗಿದೆ.
ಇದರಿಂದ ಅವಮಾನಿತಳಾಗಿ ರಾಧಾ ಮೌನಿಕ ತನ್ನ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ರೂಮಿನಲ್ಲಿ ಸಣ್ಣ ಸ್ಯೂಸೈಡ್ ನೋಟ್ ಪತ್ತೆಯಾಗಿದ್ದು, “ಲವ್ ಯು ಆಲ್, ಮಿಸ್ ಯು ಆಲ್” ಎಂದು ಬರೆಯಲಾಗಿದೆ.
ಯುವತಿ ಆತ್ಮಹತ್ಯೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಸ್ಟೆಲ್‍ನ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ ನಡೆದ ಪ್ರತಿಭಟನೆಯ ವಿಡಿಯೋವನ್ನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಟೆಲ್‍ನ ಹಾಸಿಗೆಗಳಿಗೆ ಬೆಂಕಿ ಹಚ್ಚಿರೋದನ್ನ ವಿಡಿಯೋದಲ್ಲಿ ಕಾಣಬಹುದು.
ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಬೆಂಕಿ ನಂದಿಸದಂತೆ ಅಗ್ನಿಶಾಮಕ ಸಿಬ್ಬಂದಿಯನ್ನ ತಡೆದರು ಎಂದು ವರದಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿತ್ತಿದ್ದೇವೆ. ಯುವತಿ ಆಂಧ್ರ ಮೂಲದವಳಾಗಿದ್ದು, ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದಿದ್ದರಿಂದ ಮೇಲ್ವಿಚಾರಕರು ಆಕೆಯನ್ನು ಹೊರಗೆ ಕಳಿಸಿದ್ದರು ಎಂದು ತಿಳಿದುಬಂದಿದೆ. ಆಕೆಯ ರಾಜ್ಯದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ರಾಧಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರೋಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
https://www.youtube.com/watch?v=Pyz_ZnTzQNg