ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಹಿಂಸಾಚಾರ – EVM ಅನ್ನು ಕೊಳಕ್ಕೆ ಎಸೆದ ಕಿಡಿಗೇಡಿಗಳು

Public TV
3 Min Read
Violence During Final Phase Voting In Bengal EVM Tossed Into Pond

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಇಂದು (ಜೂ.1) ಏಳನೇ ಹಂತದಲ್ಲಿ ಮತದಾನ  (Lokshabha Elections 2024) ನಡೆಯುತ್ತಿದ್ದು, ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ (West Bengal Violence) ನಡೆದ ವರದಿಯಾಗಿದೆ.

ಕೋಲ್ಕತ್ತಾ (Kolkata) ಬಳಿಯ ಜಾದವ್‍ಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭಾಂಗಾರ್‌ನ ಸತುಲಿಯಾ ಪ್ರದೇಶದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‍ಎಫ್) ಮತ್ತು ಸಿಪಿಐ(ಎಂ) ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಐಎಸ್‍ಎಫ್ ಸದಸ್ಯರು ಗಾಯಗೊಂಡಿದ್ದಾರೆ. ಅಲ್ಲದೇ ನಾಡ ಬಾಂಬ್‍ಗಳ ಎಸೆತದಿಂದ ಘರ್ಷಣೆ ಇನ್ನೂ ಉಲ್ಬಣಗೊಂಡಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯಲ್ಲಿ ಜನರ ಗುಂಪೊಂದು ಮತಗಟ್ಟೆಗಳಿಗೆ ನುಗ್ಗಿ ಇವಿಎಂ (EVM) ವಶಪಡಿಸಿಕೊಂಡು ಹತ್ತಿರದ ಕೊಳಕ್ಕೆ ಎಸೆದಿದೆ. ಮತಗಟ್ಟೆ ಏಜೆಂಟರನ್ನು ಬೂತ್‍ಗಳಿಗೆ ಪ್ರವೇಶಿಸದಂತೆ ನಿಬರ್ಂಧಿಸಿದ ನಂತರ ಈ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ವಿವಿಪ್ಯಾಟ್‍ಗಳಲ್ಲಿನ ಪೇಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

ಬೆಳಿಗ್ಗೆ 6:40ರ ವೇಳೆಗೆ ಬೇನಿಮಾಧವಪುರ ಎಫ್‍ಪಿ ಶಾಲೆಯ ಬಳಿ ಸೆಕ್ಟರ್ ಆಫೀಸರ್ ರಿಸರ್ವ್ ಇವಿಎಂಗಳು ಮತ್ತು ಪೇಪರ್‍ಗಳನ್ನು ಜಯನಗರ (ಎಸ್‍ಸಿ) ಪಿಸಿಯ ಕುಲ್ತಾಳಿಯಲ್ಲಿ ಸ್ಥಳೀಯ ಜನರ ಗುಂಪು ಲೂಟಿ ಮಾಡಿದ್ದಾರೆ ಮತ್ತು 1 ಸಿಯು, 1 ಬಿಯು, 2 ವಿವಿಪ್ಯಾಟ್ ಯಂತ್ರಗಳನ್ನು ಸಮೀಪದ ಕೊಳಗಳಿಗೆ ಎಸೆದಿದ್ದಾರೆ. ಕೂಡಲೇ ಹೊಸ ಇವಿಎಂಗಳನ್ನು ಆ ಮತಗಟ್ಟೆಗಳಿಗೆ ಒದಗಿಸಲಾಗಿದೆ. ಇವಿಎಂಗಳನ್ನು ಕೊಳಕ್ಕೆ ಎಸೆದವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಸಂದೇಶ್‍ಖಾಲಿ ಸೇರಿದಂತೆ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಭದ್ರಕೋಟೆಯಾಗಿರುವ ಡೈಮಂಡ್ ಹಾರ್ಬರ್ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯನ್ನು ಬಿಜೆಪಿ ಅಭ್ಯರ್ಥಿ ಅಭಿಜಿತ್ ದಾಸ್ ಟಿಎಂಸಿ ದುಷ್ಕೃತ್ಯ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಟಿಎಂಸಿ ಸ್ಪಷ್ಟವಾಗಿ ನಿರಾಕರಿಸಿದೆ.

ಜಾದವ್‍ಪುರದ ಗಂಗೂಲಿ ಬಗಾನ್‍ನಲ್ಲಿ ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅವರ ಶಿಬಿರ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಇಟ್ಖೋಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆಗಳು ನಡೆದಿದ್ದರಿಂದ, ದಕ್ಷಿಣ 24 ಪರಗಣ ಜಿಲ್ಲೆಯ ಕ್ಯಾನಿಂಗ್‍ನಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಈ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದ್ದು, ಮಾಧ್ಯಮದ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಪ್ರತಿಭಟನೆಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತದಾರರನ್ನು ಬೆದರಿಸಲು ಪಕ್ಷದ ಗೂಂಡಾಗಳು ಮತ್ತು ರಾಜ್ಯ ಪೊಲೀಸರನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಭಾಂಗಾರ್‍ನಲ್ಲಿ, ಟಿಎಂಸಿ ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ (ಎಐಎಸ್‍ಎಫ್) ಕಾರ್ಯಕರ್ತರ ನಡುವಿನ ಘರ್ಷಣೆ ಶನಿವಾರ ಮುಂಜಾನೆ ಭುಗಿಲೆದ್ದಿದೆ. ಮಹಿಳಾ ಎಐಎಸ್‍ಎಫ್ ಕಾರ್ಯಕರ್ತೆ ಗಾಯಗೊಂಡಿದ್ದಾರೆ. ಹೆಚ್ಚುವರಿಯಾಗಿ, ಎಐಎಸ್‍ಎಫ್ ಅಭ್ಯರ್ಥಿ ನೂರ್ ಆಲಂ ಖಾನ್ ಅವರ ವಾಹನವನ್ನು ತೃಣಮೂಲ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ.

ದಮ್ ಡಮ್, ಬರಾಸತ್, ಬಸಿರ್ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್‍ಪುರ, ಕೋಲ್ಕತ್ತಾ ದಕ್ಷಿಣ್ ಮತ್ತು ಕೋಲ್ಕತ್ತಾ ಉತ್ತರ ಸೇರಿದಂತೆ ಪಶ್ಚಿಮ ಬಂಗಾಳದ ಒಂಬತ್ತು ಲೋಕಸಭಾ ಸ್ಥಾನಗಳಿಗೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ಅಡಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಸಂಜೆ 6ರವರೆಗೆ ಮತದಾನ ನಡೆಯಲಿದೆ. ಈ ಭಾಗಗಳಲ್ಲಿ ಭಾರೀ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ. ಬಹುತೇಕ ಭಾಗಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತಕ್ಕೆ ಶುಭ ಸುದ್ದಿ; ಪಿಒಕೆ ದೇಶದ ಅವಿಭಾಜ್ಯ ಅಂಗವಲ್ಲ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್!

Share This Article