ನವದೆಹಲಿ: ಆರಗ ಜ್ಞಾನೇಂದ್ರ ಸೇರಿ ಇತರೆ ವಿವಿಐಪಿಗಳಿಗೆ ನಿವೇಶನ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತ ಎಂ.ಬಿ ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹು ಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದಕ್ಕೆ ಕೋರ್ಟ್ ರಾಜೇಶ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಎಸ್.ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಅಧಿಕಾರಿಗಳಿಗೆ ಚಾಟಿ ಬೀಸಿತು. 2021ರ ಅಕ್ಟೋಬರ್ 29ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಬಿಡಿಎ ವಿರುದ್ಧ ಕೆಂಡಾಮಂಡಲವಾಗಿದೆ.
ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆಯನ್ನು ಮಾಡುವಂತಿಲ್ಲ. ನಾವು ನಿರ್ಬಂಧಿಸಿದ್ದರೂ ಹಂಚಿಕೆ ಮಾಡಿ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ಹೇಳಿ ಚಾಟಿ ಬೀಸಿದೆ.
ಏನಿದು ಪ್ರಕರಣ?
2021ರ ಅಕ್ಟೋಬರ್ 29ರಂದು ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಗಳ ನಿವೇಶನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಬಿಡಿಎ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿತ್ತು. ಬಳಿಕ ಮಧ್ಯಂತರ ಅರ್ಜಿ ಸಲ್ಲಿಸಿ ತನ್ನ ಆದೇಶವನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್‌ಗೆ ಗುಲಾಂ ನಬಿ ಆಜಾದ್ ಗುಡ್‌ಬೈ
ಬಿಡಿಎ ವಾದ ಏನು?
ಆಯುಕ್ತರು ಕೋವಿಡ್ ಪೀಡಿತರಾಗಿದ್ದಾರೆ. ಹಾಗಾಗಿ ಅವರು ಇಂದಿನ ವಿಚಾರಣೆಗೆ ಹಾಜರಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ಆದೇಶ ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸಬೇಕಿತ್ತು. ಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದಕ್ಕೆ ಕ್ಷಮೆ ಕೋರುತ್ತೇವೆ ಎಂದು ವಕೀಲರು ಹೇಳಿದರು.
ಪೀಠ ಹೇಳಿದ್ದೇನು?
ಕೋರ್ಟ್ ಆದೇಶ ಉಲ್ಲಂಘಿಸಿದ ಬಳಿಕ ಆಯುಕ್ತರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ ಎಂದರೆ ಅರ್ಥವೇನು? ಜಿ ಕೆಟಗರಿ ನಿವೇಶನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಆಯುಕ್ತರಿಗೆ ಕೋರ್ಟ್ ಆದೇಶಗಳ ಬಗ್ಗೆ ಗೌರವವೇ ಇಲ್ಲ. ಆದೇಶಕ್ಕೆ ಅವಿಧೇಯತೆ ತೋರಿದ ರಾಜೇಶ ಗೌಡ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಂದಿನಿಂದ ಅವರು ಯಾವುದೇ ಪ್ರಮುಖ ಆದೇಶಗಳಿಗೆ ಸಹಿ ಹಾಕುವಂತಿಲ್ಲ. ಇದು ಕೋರ್ಟ್ ಆದೇಶ. ಬಿಡಿಎ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿಯವರು ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿದ್ದು ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ.