ಧಾರವಾಡ: ಕಾಂಗ್ರೆಸ್ ಅಧಿಕಾರದಲ್ಲಿದಾಗ ಉಗ್ರರ ದಾಳಿ ನಡೆದಿದ್ದರೆ ಬಿಜೆಪಿಯವರು ಧರಣಿ ಕೂರುತ್ತಿದ್ದರು. ಆದರೆ ಈಗ ಮಾತ್ರ ಸುಮ್ಮನಿದ್ದಾರೆ. ಇವರೆಲ್ಲ ಬಂಡಲ್ ದೇಶಪ್ರೇಮಿಗಳು ಎಂದು ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಪುಲ್ವಾಮ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಆಗಿರುವ ಹಲವಾರು ಘಟನೆಗಳನ್ನು ನೋಡಿ ಜನ ಕಾಂಗ್ರೆಸ್ ಪರ ನಿಂತಿದ್ದಾರೆ. ಯಾರು ಚೌಕಿದಾರ ಎಂದು ಹೇಳುತ್ತಿದ್ದರೋ ಆ ಚೌಕಿದಾರನ ಪರಿಸ್ಥಿತಿ ಏನು ಅನ್ನೋದು ಎಲ್ಲರಿಗೂ ಅರ್ಥವಾಗಿದೆ. 350 ಕೆಜಿ ಆರ್ಡಿಎಕ್ಸ್ ದೇಶಕ್ಕೆ ಹೇಗೆ ಬಂತು? ಇದು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇಂತಹ ಘಟನೆ ನಡೆದಿದ್ದರೆ ಬಿಜೆಪಿಯವರು ದೇಶಾಭಿಮಾನ ಬಿಟ್ಟು ಧರಣಿ ಕುಳಿತುಕೊಳ್ಳತಿದ್ದರು. ಇವರೆಲ್ಲ ಬಂಡಲ್ ದೇಶಾಭಿಮಾನಿಗಳು ಎಂದು ಟೀಕಿಸಿದ್ದಾರೆ.
ನೆರೆಯ ಗೋವಾದಿಂದ ಚೆಕ್‍ಪೋಸ್ಟ್ ನಲ್ಲಿ ಎರಡು ಬಾಟಲಿ ಮದ್ಯ ತರೋಕೆ ಆಗೋಲ್ಲ. ಅಷ್ಟು ಭದ್ರತೆ ಇರುತ್ತದೆ. ಅಂತದರಲ್ಲಿ ಕಾರಿನಲ್ಲಿ ಆರ್ಡಿಎಕ್ಸ್ ಸಾಗಿಸಿದ್ದಾರೆ ಅಂದರೆ ಇದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ. ದೇಶದ ಪರಿಸ್ಥಿತಿ ಎಲ್ಲಿಗೆ ಬಂತು? ಈಗ ಇಷ್ಟು ಮಾತನಾಡುವ ಸರ್ಕಾರ ಆಗ ಏನು ಮಾಡುತಿತ್ತು? ಬೇರೆಯಾರಾದರೂ ಪ್ರಧಾನಿ ಸ್ಥಾನದಲ್ಲಿ ಇದ್ದಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತಿದ್ದರು ಎಂದರು.
ಚುನಾವಣೆ ಬರುತ್ತಿದಂತೆ ಯಾವುದಾದರೂ ವಿಷಯಕ್ಕೆ ಬಿಜೆಪಿ ಅವರು ಗಲಾಟೆ ಮಾಡುತ್ತಾರೆ. ಯಾಕಂದ್ರೆ ಅವರು ಅಂತಹ ದಾರಿಯಲ್ಲಿಯೇ ಸಾಗುವವರು. ಯಾವಾಗಲೂ ಚುನಾವಣೆ ಬಂದಾಗ ಅವರು ಗಲಾಟೆ ಮಾಡಿಯೇ ಬರ್ತಾರೆ. ಅವರಿಗೆ ಬೇರೆ ದಾರಿ ಯಾವುದು ಇಲ್ಲ. ಸರ್ಕಾರ ವಿಫಲವಾಗಿದೆ ಅಂತ ಮೋದಿ ಅವರಿಗೂ ಗೊತ್ತಾಗಿದೆ. ಜಾತಿ ಜಾತಿಗೆ ಜಗಳ ಹಚ್ಚುವ ಕೆಲಸವನ್ನು ಬಿಜೆಪಿ ಅವರು ಮಾಡ್ತಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಕಾಂಗ್ರೆಸ್ ಪಕ್ಷದ ಅಭಿಪ್ರಾಯವಲ್ಲ ಎಂದು ವಿನಯ್ ಕುಲಕರ್ಣಿ ಹೇಳಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv