-ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರಿಂದ ಅಸಮಾಧಾನ
ಮಂಡ್ಯ: ರಸ್ತೆಯನ್ನು ಶಾಸಕರ ಎದುರೇ ಕೈಯಲ್ಲಿ ಕಿತ್ತು ಕಳಪೆ ಕಾಮಗಾರಿ ಬಗ್ಗೆ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕಹೊಸಗಾವಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಹೊಸಗಾವಿ ಗ್ರಾಮ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದಾಗಿದ್ದು, ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್‍ಗೌಡ ಅವರು ಶುಕ್ರವಾರ ಚಿಕ್ಕಹೊಸಗಾವಿ ಗ್ರಾಮಕ್ಕೆ ಸಭೆ ನಡೆಸಲು ಬಂದಿದ್ದರು. ಇತ್ತೀಚೆಗೆ ಗ್ರಾಮಕ್ಕೆ ಹೊಸದಾಗಿ ಡಾಂಬರು ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಅಲ್ಲಲ್ಲಿ ಬಿರುಕು ಬಿಡುತ್ತಿತ್ತು. ಗ್ರಾಮಕ್ಕೆ ಬಂದ ಶಾಸಕರನ್ನು ರಸ್ತೆಯ ಬಳಿ ಕರೆದುಕೊಂಡು ಹೋಗಿ ಡಾಂಬರನ್ನು ಕಿತ್ತು ಗ್ರಾಮಸ್ಥರು ತೋರಿಸಿದ್ದಾರೆ.
Advertisement
Advertisement
ರಸ್ತೆಗೆ ಹಾಕಿದ್ದ ಡಾಂಬರನ್ನು ಕೈಯಲ್ಲಿ ಕಿತ್ತು ಶಾಸಕರಿಗೆ ತೋರಿಸಿ ಜೆಲ್ಲಿ ಹರಡದೆ ನೆಪ ಮಾತ್ರಕ್ಕೆ ಟಾರ್ ಹಾಕಿ ಬಿಲ್ ಪಡೆಯುತ್ತಿದ್ದಾರೆ. ಇಂತಹ ರಸ್ತೆ ಎಷ್ಟು ದಿನ ಬಾಳಿಕೆ ಬರುತ್ತೆ. ಹೀಗೆ ಆದರೆ ನಿಮಗೆ ಕೆಟ್ಟ ಹೆಸರು ಬರುತ್ತೆ ಎಂದು ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ಹೊರಹಾಕಿದರು. ಇದೆಲ್ಲವನ್ನು ನೋಡಿದ ಶಾಸಕರು ಕೂಡ ಇದೇನು ರಸ್ತೆಗೆ ಟಾರ್ ಹಾಕಲು ಜೆಲ್ಲಿಯನ್ನೇ ಹಾಕಿಲ್ಲ ಎಂಬ ರೀತಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಬರ ಪರಿಹಾರದಲ್ಲಿ ಕುಡಿಯುವ ನೀರು ಪೂರೈಸಿದ್ದ ಬಿಲ್‍ನ ಹಣ ಎರಡು ವರ್ಷವಾದರೂ ನನ್ನ ಕೈ ಸೇರಿಲ್ಲ ಎಂದು ಶಾಸಕರ ಎದುರೇ ಜೆಡಿಎಸ್ ಪಕ್ಷದ ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ್ ಎಂಬವರು, ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಲತಾ ಕುಡಿಯುವ ನೀರು ಪೂರೈಸಿದ ಬಿಲ್ ನೀಡುತ್ತಿಲ್ಲ. ನನ್ನನ್ನು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ದೂರಿದರು. ಈ ಸಮಯದಲ್ಲಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಶಾಸಕರೇ ಎಲ್ಲರನ್ನೂ ಸಮಾಧಾನ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv