– ಇಬ್ಬರು ಪ್ರಭಾವಿ ಶಾಸಕರಿದ್ರೂ ನೋ ಯೂಸ್
ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಹಾಗೂ ಚಿತ್ತಾಪುರ ತಾಲೂಕಿನ ಚಾಮನೂರ ಗ್ರಾಮದ ಮಧ್ಯದಲ್ಲಿರುವ ಭೀಮಾ ನದಿಯ ಆಸುಪಾಸಿನ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ನದಿಯಲ್ಲಿ ಈಗ ಪ್ರಾಣವನ್ನೇ ಪಣಕ್ಕಿಟ್ಟು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ನದಿ ದಾಟಲು ಇಲ್ಲಿ ಒಂದೇ ಒಂದು ಬೋಟ್ ಇದೆ. ದುರಾದೃಷ್ಟ ಅಂದ್ರೆ ಈ ಬೋಟ್‍ನಲ್ಲಿ ಕಳೆದ 6 ತಿಂಗಳಿನಿಂದ ದೊಡ್ಡ ದೊಡ್ಡ ರಂಧ್ರಗಳು ಕಾಣಿಸಿಕೊಂಡಿದ್ದು, ನದಿಯಲ್ಲಿ ಸಾಗುತ್ತಿದ್ದಂತೆಯೇ ರಭಸವಾಗಿ ನೀರು ತುಂಬಲು ಆರಂಭವಾಗುವ ಮೂಲಕ ಜನರ ಸಾವಿಗೆ ಆಹ್ವಾನ ನೀಡುತ್ತಿದೆ. ಈ ವೇಳೆ ಬೋಟ್ ಚಾಲಕ ಹಾಗೂ ಆತನ ಮೂರು ಜನ ಸಿಬ್ಬಂದಿ ಹೀಗೆ ಬಕೆಟ್‍ಗಳಿಂದ ಬೋಟ್‍ನಲ್ಲಿದ್ದ ನೀರನ್ನು ನಿರಂತರವಾಗಿ ತೆಗೆಯಬೇಕಾಗುತ್ತದೆ. ಇನ್ನೊಂದೆಡೆ ಈ ಬೋಟ್‍ನ ತಳಭಾಗ ಬಹುತೇಕ ಶಿಥಿಲಗೊಂಡಿದ್ದು ಯಾವಾಗ ಬೇಕಾದ್ರೂ ನದಿಯಲ್ಲಿ ಮುಳುಗಬಹುದು. ಆದ್ರೂ ಇಲ್ಲಿನ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಇದರಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ ಅಂತ ಗ್ರಾಮದ ನಿವಾಸಿ ಮಾಳಪ್ಪ ಹೇಳುತ್ತಾರೆ.
Advertisement
Advertisement
ಬೋಟ್ ಅವ್ಯವಸ್ಥೆ ಒಂದೆಡೆಯಾದರೆ ಮತ್ತೊಂದೆಡೆ ಮೊಸಳೆ ಕಾಟ. ದಡದಲ್ಲಿ ಯಾವಾಗಲೂ ಮೊಸಳೆ ಕಾಣಸಿಗತ್ತದೆ. ಹೊಸ ಬೋಟ್ ನೀಡುವಂತೆ ಎರಡು ಗ್ರಾಮದ ಜನ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಈ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಈಗಾಗಲೇ ಸೇತುವೆ ಕಾಮಗಾರಿ ಆರಂಭವಾದ್ರೂ ಅದು ಮುಗಿಯಲು ಕನಿಷ್ಠ 4 ವರ್ಷ ಬೇಕಾಗುತ್ತದೆ. ಹೀಗಾಗಿ ಅಲ್ಲಿಯವರಗೆ ಈ ಎರಡು ಗ್ರಾಮದ ಜನ ಜೀವವನ್ನು ಪಣಕ್ಕಿಟ್ಟು ಈ ಬೋಟ್‍ನಲ್ಲಿಯೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
Advertisement
Advertisement
ದುರಂತ ಅಂದ್ರೆ ಎಚ್‍ಕೆಆರ್‍ಡಿಬಿಗೆ ಬರುವ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನರಿಬೋಳ ಗ್ರಾಮ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ವ್ಯಾಪ್ತಿಗೆ ಬಂದ್ರೆ, ಇತ್ತು ಚಾಮನೂರ ಗ್ರಾಮ ಶಾಸಕ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರಕ್ಕೆ ಸೇರುತ್ತದೆ. ರಾಜ್ಯ ರಾಜಕೀಯದಲ್ಲಿ ಮಿಂಚುತ್ತಿರುವ ಈ ಇಬ್ಬರು ನಾಯಕರ ಕ್ಷೇತ್ರದಲ್ಲಿನ ಜನ ಇಂತಹ ಸಂಕಷ್ಟದಲ್ಲಿರುವದು ದುರಂತವೇ ಸರಿ.
ಕೂಡಿ ಗ್ರಾಮದಿಂದ ನರಿಬೋಳ ಗ್ರಾಮಕ್ಕೆ ಬೋಟ್ ಶಿಫ್ಟ್ ಮಾಡಲು ಜಿಲ್ಲಾಡಳಿತ ಯೋಚಿಸುತ್ತಿದೆ. ಒಂದು ವೇಳೆ ಅಲ್ಲಿಂದ ಬೋಟ್ ತಂದ್ರೆ ಅಲ್ಲಿನ ಜನ ನದಿ ದಾಟಲು ಆಗುವುದಿಲ್ಲ. ಸದ್ಯ ಈ ವಿಷಯ ಕಲಬುರಗಿ ಜಿಲ್ಲಾಡಳಿತ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ಬಂದ್ರು ಯಾವುದೇ ಪ್ರಯೋಜನವಾಗದಿರೋದು ವಿಪರ್ಯಾಸವಾಗಿದೆ. ಒಟ್ಟಿನಲ್ಲಿ ಅವಘಡ ನಡೆಯುವ ಮುನ್ನ ಕ್ಷೇತ್ರದ ಇಬ್ಬರು ಶಾಸಕರು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಈ ಸಾವಿನ ಸಂಚಾರಕ್ಕೆ ಮುಕ್ತಿ ನೀಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv