ದಾವಣಗೆರೆ: ಅಕಾಲಿಕವಾಗಿ ಸಾವನ್ನಪ್ಪಿದ ಕೋತಿಗೆ ಹಿಂದೂ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲಾ ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ನಡೆದಿದೆ.
ನಗರದ ಎಸ್.ವಿ.ಆರ್ ಕಾಲೋನಿ ಜನ ಈ ಕಾರ್ಯ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ಎರಡು ಮಂಗಗಳು ಎಸ್.ವಿ.ಆರ್ ಕಾಲೋನಿಗೆ ಬಂದಿದ್ದವು. ಇಲ್ಲಿನ ಜನರಿಗೆ ಯಾವುದೇ ತೊಂದರೆ ಕೊಡದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. ಮಕ್ಕಳ ಜೊತೆ ಆಟವಾಡುತ್ತಾ ಎಲ್ಲರ ಮನಸ್ಸು ಗೆದ್ದಿದ್ದವು. ಆದರೆ ಬುಧವಾರ ಅಕಾಲಿಕವಾಗಿ ಸಾವನ್ನಪ್ಪಿದ ಮಂಗಕ್ಕೆ ಮನುಷ್ಯರ ಅಂತ್ಯಕ್ರಿಯೆ ನಡೆಸುವಂತೆಯೇ ಹಿಂದೂ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲಾ ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ಒಂದೇ ಕಣ್ಬಿಟ್ಟ ಆಂಜನೇಯ ಮೂರ್ತಿ- ಭಜರಂಗಿಯನ್ನು ನೋಡಲು ಮುಗಿಬಿದ್ದ ಭಕ್ತರು
ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕೋತಿ ಸದಾ ಜನರ ಮನಸ್ಸಲ್ಲಿ ಉಳಿಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಸಮಾಧಿ ಮೇಲೆ ಈಗ ಚಿಕ್ಕದಾದ ಆಂಜನೇಯನ ಗುಡಿ ಸ್ಥಾಪಿಸಿ, ಅಲ್ಲಿ ಆಂಜನೇಯ ಭಾವಚಿತ್ರ ಇಟ್ಟು ಜನರು ಪೂಜಿಸತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಜಾಗದಲ್ಲಿ ದೊಡ್ಡದಾದ ಆಂಜನೇಯನ ದೇಗುಲ ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.