ಬಾಗಲಕೋಟೆ: ವಿದ್ಯಾರ್ಥಿನಿಯರ ದೇಹವನ್ನು ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾದಾಮಿ ತಾಲೂಕಿನ ಖಬಂದಕೇರಿ ಗ್ರಾಮದಲ್ಲಿ ನಡೆದಿದೆ.
ಬದಾಮಿ ತಾಲೂಕಿನ ಹಾನಾಪುರ ತಾಂಡಾ ನಿವಾಸಿ ರಾಮಚಂದ್ರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಶಿಕ್ಷಕ. ರಾಮಚಂದ್ರ ಖಬಂದಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾನೆ.
ರಾಮಚಂದ್ರ ಆರು ಹಾಗೂ ಏಳನೇ ತರಗತಿಯ ವಿದ್ಯಾರ್ಥಿನಿಯರನ್ನು ತನ್ನ ಬಳಿಗೆ ಕರೆದು, ಅವರ ಅಂಗಾಂಗ ಸ್ಪರ್ಶಿಸಿ, ಚಿವುಟುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ. ಶಿಕ್ಷಕರ ವರ್ತನೆಯಿಂದ ಬೇಸತ್ತ ಕೆಲ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ದೂರು ನೀಡಿದ್ದಾರೆ. ತಕ್ಷಣವೇ ಶಾಲೆಗೆ ಬಂದ ಪೋಷಕರು ಹಾಗೂ ಕೆಲ ಸ್ಥಳೀಯರು ರಾಮಚಂದ್ರನನ್ನು ಹಿಡಿದು ಥಳಿಸಿ ಕೂಡಿ ಹಾಕಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ಬದಾಮಿ ಬಿಇಓ ಅವರು ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿಗಳನ್ನು ಬಿಇಓ ವಿಚಾರಿಸಿದಾಗ, ನಮ್ಮನ್ನು ಅನಾವಶ್ಯಕವಾಗಿ ಸ್ಪರ್ಶಿಸುತ್ತಾರೆ. ಕರೆದು ಬೆನ್ನು ತಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದರು.
ಈ ಹಿಂದೆಯೂ ನಮ್ಮ ಮಕ್ಕಳು ಹೇಳಿದ್ದರಿಂದ ಶಾಲೆಗೆ ಬಂದು ಎಚ್ಚರಿಗೆ ನೀಡಿದ್ದೇವು. ಆದರೆ ಈಗ ರಾಮಚಂದ್ರ ಅವರ ವರ್ತನೆಯಿಂದ ಮತ್ತಷ್ಟು ಮಕ್ಕಳಿಗೆ ತೊಂದರೆ ಆಗುತ್ತಿದೆ. ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv