ವಿಜಯಪುರ: ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ ಪ್ರಮಾಣಕ್ಕೆ ಜಿಲ್ಲೆಯ ಭೀಮಾನದಿ ಉಕ್ಕಿ ಹರಿಯುತ್ತಿದೆ. ಉಜನಿ ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಸಿಂಧಗಿ ತಾಲೂಕಿನ ಭೀಮಾತೀರದ ತಾರಾಪೂರ ಗ್ರಾಮ ಜಲಾವೃತ್ತಗೊಂಡಿದೆ.
ಪರಿಣಾಮ ಗ್ರಾಮದ ಮನೆಗಳನ್ನ ನೀರು ಸುತ್ತುವರಿಯುತ್ತಿದ್ದು, ಆತಂಕದಲ್ಲಿ ತಾರಾಪುರ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ. ಗ್ರಾಮದ ಸಂಪರ್ಕ ರಸ್ತೆ ಕೂಡ ಜಲಾವೃತವಾಗಿದ್ದು, ನೀರಿನಲ್ಲಿ ನಡೆದುಕೊಂಡೆ ಮಕ್ಕಳು ಶಾಲೆಗೆ ಹೋಗುವಂತಾಗಿದೆ. ಅಷ್ಟೇ ಅಲ್ಲದೇ ಜಮೀನುಗಳಿಗೂ ನೀರು ನುಗ್ಗಿದ್ದು, ಬೆಳೆಗಳು ನಾಶವಾಗಿದೆ.
2004 ರಲ್ಲಿ ಇದೇ ರೀತಿ ಭಾರೀ ಮಳೆ ಸುರಿದ ಪರಿಣಾಮ ಗ್ರಾಮ ಮುಳುಗಡೆಯಾಗಿತ್ತು. ಹೀಗಾಗಿ ಬೇರೆಡೆಗೆ ಗ್ರಾಮ ಸ್ಥಳಾಂತರಗೊಂಡಿತ್ತು. ಆದರೆ ಒಟ್ಟು 240 ಕುಟುಂಬಗಳಲ್ಲಿ ಕೇವಲ 140 ಜನರಿಗೆ ಜಾಗ ಸಿಕ್ಕಿದ್ದು, ಇನ್ನುಳಿದವರಿಗೆ ಇದೂವರೆಗೂ ಪರಿಹಾರ ಸಿಕ್ಕಿಲ್ಲ. ಆ ಕಾರಣಕ್ಕಾಗಿ ಇದೇ ಗ್ರಾಮದಲ್ಲಿ ಜನರು ವಾಸಿಸುತ್ತಿದ್ದಾರೆ. ಭೀಮಾ ನದಿಯಲ್ಲಿ ನೀರು ಹೆಚ್ಚಾದಾಗಲೆಲ್ಲ ಇಂತಹ ಪರಿಸ್ಥಿತಿ ಗ್ರಾಮಸ್ಥರು ಎದುರಿಸುವಂತಾಗಿದೆ. ಆದ್ದರಿಂದ ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv