– ರಕ್ಷಣಾ ಉತ್ಪಾದನೆ 4 ಪಟ್ಟು ಹೆಚ್ಚಾಗಿದೆ – ಭಾರತದ ಆರ್ಥಿಕ ಪ್ರಗತಿಗೆ ಪ್ರಧಾನಿ ಮೆಚ್ಚುಗೆ
ನವದೆಹಲಿ: 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಲು ದೇಶದ 140 ಕೋಟಿ ಜನರು ಒಗ್ಗಟ್ಟಿನಿಂದ, ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ದೆಹಲಿಯ ಕೆಂಪುಕೋಟೆಯ ಆವರಣದಿಂದ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಲು ದೇಶದ 140 ಕೋಟಿ ಜನರು ಒಗ್ಗಟ್ಟಿನಿಂದ, ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
Addressing the nation on Independence Day.https://t.co/Q67F6cB96x
— Narendra Modi (@narendramodi) August 15, 2026
ಕಳೆದ 12 ವರ್ಷಗಳಲ್ಲಿ ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಗಿದೆ. ಹಾಗಾಗಿ ದೇಶೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಅಭಿಯಾನವನ್ನು ಬಲಪಡಿಸುವುದು ಹಾಗೂ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವುದು ಅತ್ಯಂತ ಮುಖ್ಯ.
2047ರೊಳಗೆ ‘ವಿಕಸಿತ ಭಾರತ’ದ ಗುರಿ
ಭಾರತದ ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ದೇಶವನ್ನ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯನ್ನು ಸಾಧಿಸಲೇಬೇಕು. ಈ ಗುರಿಯನ್ನು ನಾವು ಸಾಧಿಸಲೇಬೇಕು. 140 ಕೋಟಿ ಭಾರತೀಯರೂ ಇದಕ್ಕಾಗಿ ಶ್ರಮಿಸಬೇಕು. ವಿಶ್ವದ ಅತಿದೊಡ್ಡ ಜನಸಂಖ್ಯೆಯ ರಾಷ್ಟ್ರವೊಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪ ಕೈಗೊಂಡಾಗ, ಅದು ನಮ್ಮ ಧೈರ್ಯಕ್ಕೆ ಸಾಕ್ಷಿಯಾಗುತ್ತದೆ. ಆಗ ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ ಎಂದು ಅವರು ಹೇಳಿದರು.
ಕಳೆದ 12 ವರ್ಷಗಳಲ್ಲಿ ದಲಿತರು, ಶೋಷಿತರು, ಬಡವರು, ಮಧ್ಯಮ ವರ್ಗದವರು, ಯುವಕರು ಸೇರಿದಂತೆ ಕೋಟ್ಯಂತರ ಭಾರತೀಯರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಶ್ರಮಿಸಿದ್ದಾರೆ. ಈ ಪ್ರಯತ್ನಗಳ ಫಲವಾಗಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಆರ್ಥಿಕ ಪ್ರಗತಿಗೆ ಮೆಚ್ಚುಗೆ
ಕಳೆದ 12 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ. ದೇಶದ ರಕ್ಷಣಾ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಿದೆ. ಕೃತಕ ಬುದ್ಧಿಮತ್ತೆ, ಅಣುಶಕ್ತಿ, ದೂರಸಂಪರ್ಕ, ಡಿಜಿಟಲ್ ತಂತ್ರಜ್ಞಾನ ಹಾಗೂ ರೈಲ್ವೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಳೆದ 12 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿದೆ. ಖಾದಿ ಮತ್ತು ಗ್ರಾಮೋದ್ಯಮದ ಉತ್ಪಾದನೆ 5 ಪಟ್ಟು ಏರಿಕೆಯಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ ಏಳು ಪಟ್ಟು ಹೆಚ್ಚಾಗಿದೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ 33 ಪ್ರತಿಶತ ಏರಿಕೆಯಾಗಿದೆ. ಡಿಜಿಟಲ್ ವಹಿವಾಟುಗಳಲ್ಲಿ 100 ಪ್ರತಿಶತ ವೃದ್ಧಿಯಾಗಿದೆ. ಇಂಧನ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದೆಲ್ಲದರ ಜೊತೆಗೆ ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಇಂಧನ ಭದ್ರತೆ ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು
* ಇಂದು ಪ್ರತಿಯೊಂದು ಹೃದಯವೂ ‘ವಂದೇ ಮಾತರಂ’ದ ಲಯದೊಂದಿಗೆ ಮಿಡಿಯುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ತಿರಂಗಾ ಇದೆ, ಪ್ರತಿಯೊಂದು ಮನಸ್ಸಿನಲ್ಲೂ ತಿರಂಗಾ ಇದೆ.
* ಈ ಸ್ವಾತಂತ್ರ್ಯ ದಿನದಂದು ಬಾಪು (ಮಹಾತ್ಮ ಗಾಂಧೀಜಿ) ಹಾಗೂ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಿಗೆ ನಾನು ಗೌರವಪೂರ್ವಕ ನಮನ ಸಲ್ಲಿಸುತ್ತೇನೆ. ಇದು ಐತಿಹಾಸಿಕ ದಿನ. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಕೆಂಪುಕೋಟೆಯ ಗೋಡೆಗಳಿಂದ ‘ವಂದೇ ಮಾತರಂ’ ಘೋಷಣೆ ಪ್ರತಿಧ್ವನಿಸಿದೆ.
* ಇಂದು ನಾವು 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಇಂದು ‘ವಂದೇ ಮಾತರಂ’ ಘೋಷಣೆ ಪ್ರತಿಯೊಂದು ಹೃದಯದಲ್ಲೂ ಪ್ರತಿಧ್ವನಿಸುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ ಮತ್ತು ಪ್ರತಿಯೊಂದು ಮನಸ್ಸಿನಲ್ಲೂ ತಿರಂಗಾ ನೆಲೆಸಿದೆ. ಹೊಸ ಸಂಕಲ್ಪಗಳೊಂದಿಗೆ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ದೇಶ ಮುನ್ನಡೆಯುತ್ತಿದೆ.
* ಕಳೆದ ಕೆಲವು ದಿನಗಳಲ್ಲಿ ದೇಶದ ಕೆಲವು ಭಾಗಗಳು ಪ್ರವಾಹಕ್ಕೆ ತುತ್ತಾಗಿದ್ದು, ಅನೇಕ ಜನರು ಇದರಿಂದ ಬಾಧಿತರಾಗಿದ್ದಾರೆ. ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಇಡೀ ದೇಶವೇ ಅವರೊಂದಿಗೆ ನಿಂತಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ.
* 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಹತ್ವದ ಕನಸು ಇಂದು ನಮ್ಮ ಮುಂದಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪ ಮಾಡಿದಾಗ, ಅದು ನಮ್ಮ ಧೈರ್ಯ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತದೆ. ಜಗತ್ತು ಭಾರತವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವಂತೆ ಆಗುತ್ತದೆ.
* ಇತ್ತೀಚೆಗೆ ದೇಶದ ಕೆಲವು ಭಾಗಗಳು ಪ್ರವಾಹ ಮತ್ತು ಭೂಕುಸಿತದ ಭೀಕರ ಪರಿಣಾಮವನ್ನು ಎದುರಿಸಿವೆ. ಅನೇಕ ಕುಟುಂಬಗಳು ಇದರಿಂದ ಸಂಕಷ್ಟಕ್ಕೀಡಾಗಿವೆ. ಅವರ ನೋವಿಗೆ ನಾವು ಆಳವಾದ ಸಹಾನುಭೂತಿ ವ್ಯಕ್ತಪಡಿಸುತ್ತೇವೆ. ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ನಾವು ಹಾಗೂ ಇಡೀ ದೇಶ ನಿಮ್ಮೊಂದಿಗಿದ್ದೇವೆ ಎಂದು ನಾನು ಭರವಸೆ ನೀಡುತ್ತೇನೆ.
* ಒಂದು ರಾಷ್ಟ್ರವು ತನ್ನ ಕನಸುಗಳು, ಸಂಕಲ್ಪ ಮತ್ತು ತನ್ನೊಳಗಿನ ಶಕ್ತಿಯಿಂದ ಮುನ್ನಡೆದಾಗ ಮಾತ್ರ ಮಹಾನ್ ಆಗುತ್ತದೆ ಮತ್ತು ತನ್ನ ಗುರಿಗಳನ್ನು ಸಾಧಿಸುತ್ತದೆ. ಇನ್ನು ಸಣ್ಣ ಕನಸುಗಳು ಸಾಕಾಗುವುದಿಲ್ಲ. ನಾವು ದೊಡ್ಡ ಕನಸುಗಳನ್ನು ಕಾಣಬೇಕು. ಏಕೆಂದರೆ ದೊಡ್ಡ ಕನಸುಗಳು ನಮ್ಮ ಚಿಂತನೆಗಳನ್ನು ವಿಸ್ತರಿಸುತ್ತವೆ ಮತ್ತು ನಮ್ಮ ದೃಷ್ಟಿಕೋನದ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಸಂಕಲ್ಪ ದೃಢವಾಗಿರಬೇಕು. ಸಂಕಲ್ಪ ಗಟ್ಟಿಯಾಗಿದ್ದಾಗ, ಕಷ್ಟಗಳು ಮತ್ತು ವಿಪತ್ತುಗಳ ನಡುವೆಯೂ ಮುಂದೆ ಸಾಗುವ ದಾರಿಯನ್ನು ಕಂಡುಕೊಳ್ಳುವ ಸಾಮರ್ಥ್ಯ ಸಹಜವಾಗಿಯೇ ಮೂಡುತ್ತದೆ.
* ನಾವೂ ಒಂದು ಮಹತ್ವಾಕಾಂಕ್ಷೆಯ ಕನಸನ್ನು ಕಂಡಿದ್ದೇವೆ. ದೃಢ ಸಂಕಲ್ಪದೊಂದಿಗೆ ಹೊಸ ಎತ್ತರಗಳನ್ನು ತಲುಪುವ ಕನಸು. ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವುದು ನಮ್ಮ ದೃಷ್ಟಿಯಾಗಿದೆ.
