ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಆರೋಪ ಕಮಲ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ್ದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ವಿಡಿಯೋ ಆಸ್ತ್ರ ಬಿಡುಗಡೆ ಮಾಡಿದ್ದಾರೆ.
ಬಿಎಸ್‍ವೈ ನಿವಾಸದ ಬಳಿ ಮಾತನಾಡಿದ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಅವರು, ಬಿಜೆಪಿ ವಿರುದ್ಧ ಆಪರೇಷನ್ ಕಮಲ ಹೆಸರಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಸುಳ್ಳು ಆರೋಪ ಮಾಡಿದ್ದಾರೆ. ಆದರೆ ಈ ಹಿಂದೆ ಕುಮಾರಸ್ವಾಮಿ ಅವರೇ ಎಂಎಲ್‍ಸಿ ಸ್ಥಾನಕ್ಕಾಗಿ 25 ಕೋಟಿ ರೂ. ಬೇಡಿಕೆ ಇಟ್ಟಿರುವ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಸದನದಲ್ಲಿ ಪ್ರಸ್ತಾಪ ಮಾಡಿ ವಿಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ. ಅಲ್ಲದೇ ವಿಡಿಯೋವನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡಿ ಅವರ ಕೊಠಡಿಯಲ್ಲಿ ವೀಕ್ಷಿಸಲು ಮನವಿ ಮಾಡಿಕೊಳ್ಳಲಾಗುತ್ತದೆ. ಈ ವೇಳೆ ಸ್ವತಃ ಸಿಎಂ ಅವರು ಕೂಡ ವಿಡಿಯೋ ನೋಡಿ ಈ ಬಗ್ಗೆ ಉತ್ತರ ನೀಡಲು ಅವಕಾಶ ನೀಡಲಾಗುವುದು ಎಂದು ಅರವಿಂದ ಲಿಂಬಾವಳಿ ವಿವರಿಸಿದರು.
ಆಪರೇಷನ್ ಕಮಲ ಮಾಡಲು ಅರವಿಂದ ಲಿಂಬಾವಳಿ ಹಾಗೂ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು ಮುಂಬೈನಲ್ಲಿ ತಂಗಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾನು ಪಕ್ಷದ ಜವಾಬ್ದಾರಿ ನಿರ್ವಹಿಸಲು ತೆಲಂಗಾಣಕ್ಕೆ ತೆರಳಿದ್ದೆ. ಹಾಗಿದ್ದರೂ ಕೂಡ ತಮ್ಮ ಮೇಲೆ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ. ಆದರೆ ಆರೋಪ ಮಾಡುವವರಿಗೆ ಯಾವುದೇ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗೆಳೆದರು.
ಬಿಜೆಪಿ ಬಿಡುಗಡೆ ಮಾಡಲಿರುವ ವಿಡಿಯೋ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಅರವಿಂದ ಲಿಂಬಾವಳಿ, ಸದನದಲ್ಲಿ ಈ ಕುರಿತು ಬಿಎಸ್‍ವೈ ಅವರೇ ಹೆಚ್ಚಿನ ಮಾಹಿತಿ ನೀಡುತ್ತಾರೆ ಎಂದು ಕುತೂಹಲವನ್ನು ಕಾಯ್ದುಕೊಂಡರು.
2014 ರಲ್ಲಿ ವಿಜುಗೌಡ ಪಾಟೀಲ್ ಅವರ ಬಳಿ ಎಂಎಲ್‍ಸಿ ಮಾಡಲು ಎಚ್‍ಡಿಕೆ ಅವರು 25 ಕೋಟಿ ರೂ. ಕೇಳಿದ್ದಾರೆ ಎನ್ನಲಾಗಿದ್ದ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಲಿ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಚುನಾವಣೆಯ ವೇಳೆಯಲ್ಲೂ ಕೂಡ ಇದೇ ವಿಡಿಯೋವನ್ನು ಮಂಡ್ಯದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಆದೇ ಹಳೆ ವಿಡಿಯೋ ಆಸ್ತ್ರವನ್ನು ಬಿಜೆಪಿ ಮತ್ತೆ ಪ್ರಯೋಗಿಸಲಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv