ವಿಜಯಪುರ: ಕೊರೊನಾ ಭೀತಿ ಹಿನ್ನೆಲೆ ಭಾರತ ಸಂಪೂರ್ಣ ಲಾಕ್ ಡೌನ್ ಆಗಿದೆ. ಹಾಗಾಗಿ ವಿಜಯಪುರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಈ ವೇಳೆ ಬಾಲಕನೊರ್ವ ಕಬ್ಬಿನ ಹಾಲಿನ ಗಾಡಿಯೊಳಗೆ ಲಾಕ್ ಆದ ಘಟನೆ ವಿಜಯಪುರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ.
ಆಟವಾಡುತ್ತ ಕಬ್ಬಿನ ಗಾಡಿಯ ಪೆಟ್ಟಿಗೆಯೊಳಗೆ ಬಾಲಕ ಹೋಗಿದ್ದಾನೆ. ನಂತರ ಗಾಡಿ ಮಾಲೀಕ ಬಾಲಕನನ್ನು ಗಮನಿಸದೆ ಪೆಟ್ಟಿಗೆಗೆ ಬೀಗ ಜಡಿದು ಮನೆಗೆ ತೆರಳಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸರು ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ. ಆಗ ಟ್ರಾಫಿಕ್ ಪೊಲೀಸ್ ಅರವಿಂದ ನಾಟೀಕರ ಅವರಿಗೆ ಯಾರೋ ಕಿರುಚುತ್ತಿರುವ ಶಬ್ದ ಕೇಳಿದೆ.
Advertisement
Advertisement
ಶಬ್ದ ಎಲ್ಲಿಂದ ಬರುತ್ತಿದೆ ಎಂದು ಗಮನಿಸಿದಾಗ ಪೆಟ್ಟಿಗೆ ಒಳಗೆ ಬಾಲಕ ಕೂಗುತ್ತಿರುವುದು ಕೇಳಿಸಿದೆ. ಆಗ ಟ್ರಾಫಿಕ್ ಪೊಲೀಸ್ ಬೀಗ ಹಾಕಿದ ಪೆಟ್ಟಿಗೆಯನ್ನು ಮುರಿದು ಬಾಲಕನ್ನು ಹೊರತೆಗೆದಿದ್ದಾರೆ. ಹೊರಬರಲಾಗದೆ ಬಾಲಕ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದಾಗ ಅದೃಷ್ಟವಶಾತ್ ಅರವಿಂದ ಅವರು ನೋಡಿ ಒಂದು ಪುಟ್ಟ ಜೀವವನ್ನು ಉಳಿಸಿದ್ದಾರೆ. ಪೇದೆ ಅರವಿಂದವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.