ಮೊನ್ನೆಯಷ್ಟೇ ಕೆಡಿ ಸಿನಿಮಾದ ಶೂಟಿಂಗ್ ಮುಕ್ತಾಯವಾದ ಸುದ್ದಿಯನ್ನು ನಿರ್ದೇಶಕ ಪ್ರೇಮ್ ಬಹಿರಂಗ ಪಡಿಸಿದ್ದರು. ಇದೀಗ ಇದೇ ಸಿನಿಮಾದ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಕೆಡಿ ಸಿನಿಮಾ ಎರಡು ಭಾಗವಾಗಿ ಮೂಡಿ ಬರಲಿದ್ದು, ಮೊದಲ ಭಾಗದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಸೇತುಪತಿ ಕಾಣಿಸಿಕೊಂಡರೆ, ಎರಡನೇ ಭಾಗದಲ್ಲಿ ಹೆಚ್ಚು ಸ್ಕ್ರೀನ್ ಸ್ಪೆಸ್ ಹೊಂದಲಿದ್ದಾರಂತೆ.
ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ.
ಹೊಸ ವರ್ಷದ ದಿನದಂದು ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮಾರ್ಟಿನ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮಾರ್ಟಿನ್ ಗಿಂತ ಮುಂಚೆ ಕೆಡಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಡಿ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಮಾರ್ಟಿನ್ ಕೆಲಸದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ. ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸಿದ್ದಾರೆ.