ನಮ್ಮ ಬೆಂಗಳೂರು ಉಳಿಸುವುದು ನಮ್ಮ ಕರ್ತವ್ಯ: ವಿಜಯ್ ದೇವರಕೊಂಡ

Public TV
3 Min Read
Vijay Deverakonda

ಬೆಂಗಳೂರು: ಟಾಲಿವುಡ್ ನಲ್ಲಿ ಸತತ ಯಶಸ್ವಿ ಚಿತ್ರಗಳ ಮೂಲಕ ಹೆಸರು ಪಡೆದಿರುವ ನಟ ವಿಜಯ್ ದೇವರಕೊಂಡ ತಮ್ಮ ಜೀವನದಲ್ಲಿ ಬೆಂಗಳೂರು ಹಾಗೂ ಸ್ಯಾಂಡಲ್‍ವುಡ್ ಸ್ಟಾರ್ ನಟರೊಂದಿಗೆ ತಮಗಿರುವ ಆತ್ಮೀಯತೆಯನ್ನು ಬಿಚ್ಚಿಟ್ಟಿದ್ದಾರೆ.

ವಿಜಯ್ ತಮ್ಮ ಮುಂದಿನ ಸಿನಿಮಾ `ನೋಟಾ’ ಕುರಿತ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ್ದು, ನನ್ನ ಸಿನಿಮಾ ಕುರಿತು ಮೊದಲು ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು ಅವರು ಮಾತನಾಡಿದ ವೇಳೆ ಅಚ್ಚರಿ ಆಗಲಿಲ್ಲ. ಆದರೆ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಸರ್ ಫೋನ್ ಮಾಡಿದ ವೇಳೆ ಅಚ್ಚರಿಗೊಂಡಿದೆ. ಅಲ್ಲದೇ ನನ್ನ ಭೇಟಿ ಮಾಡಲು ಶಿವರಾಜ್ ಕುಮಾರ್ ಅವರು ಇಷ್ಟಪಟ್ಟಿದ್ದು ಹೆಚ್ಚು ಖುಷಿ ಕೊಟ್ಟಿತ್ತು. ಅಲ್ಲದೇ ಸುದೀಪ್ ಸರ್ ಕೂಡ ನನಗೆ ಹೆಚ್ಚು ಪರಿಚಯ ಇದ್ದಾರೆ. ಬಿಗ್ ಬಾಸ್ ವೇಳೆ ನಾನು ಅವರನ್ನು ಭೇಟಿ ಮಾಡಿದ್ದೆ ಎಂದು ತಮ್ಮ ನೆನಪಿನ ಸರಣಿಯನ್ನು ತೆರೆದಿಟ್ಟರು.

vijay devarakonda nota

ಕಾಲೇಜು ಜೀವನದ ದಿನಗಳಲ್ಲೇ ತಾನು ಹೆಚ್ಚು ಬೆಂಗಳೂರಿಗೆ ಆಗಮಿಸುತ್ತಿದ್ದೆ. ನಾನು ಓದುತ್ತಿದ್ದ ಕಾಲೇಜಿನಿಂದ ಕೇವಲ 4 ಗಂಟೆಗಳ ಜರ್ನಿ. ಆದ್ದರಿಂದ ನಾನು ಹೆಚ್ಚು ಬಾರೀ ಇಲ್ಲಿಗೆ ಭೇಟಿ ನೀಡಿದ್ದೇನೆ. ಅಲ್ಲದೇ ನನ್ನ ಸ್ಮೇಹಿತರು ಹೆಚ್ಚು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ಅಲ್ಲಿಂದ ಹೆಬ್ಬಾಳ, ಜಾಲಹಳ್ಳಿ ಪ್ರದೇಶದಲ್ಲಿ ಹೆಚ್ಚು ಓಡಾಟ ನಡೆಸಿದ್ದೇನೆ. ಆದರೆ ಅಂದು ಮಾಡಿದಂತೆ ಇಂದು ಇರಲು ಸಾಧ್ಯವಾಗುತ್ತಾ ಎಂಬುವುದು ನನಗೆ ಗೊತ್ತಿಲ್ಲ ಎಂದರು.

ನಮ್ಮ ಬೆಂಗಳೂರು ಉಳಿಸುವುದು ನಮ್ಮ ಕರ್ತವ್ಯ: ನನ್ನ ಹೆಚ್ಚಿನ ವಿರಾಮ ಸಮಯವನ್ನು ನಾನು ಇಲ್ಲಿಯೇ ಕಳೆಯುತ್ತಿದ್ದ ಕಾರಣದಿಂದ ನಾನು ಬೆಂಗಳೂರಿಗೆ ತುಂಬಾ ಸನಿಹನಾಗಿದ್ದೇನೆ. ಆದರೆ ಕೆಲ ಮಾಧ್ಯಮಗಳಲ್ಲಿ ಬೆಂಗಳೂರು 2020 ರ ವೇಳೆಗೆ ಹೆಚ್ಚಿನ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ವರದಿಯಾಗಿದೆ. ಆದ್ದರಿಂದ ನಮ್ಮ ಬೆಂಗಳೂರು ರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯ. ಇದಕ್ಕಾಗಿ ನಾವು ಕಾರ್ಯಪ್ರವೃತ್ತರಾಗಬೇಕು  ಎಂದರು.

vijay devarakonda 4

ನನ್ನ ತಾಯಿ ಕನ್ನಡ ಮೂಲದವರೇ ಆಗಿರುವುದರಿಂದ ಅವರು ಕನ್ನಡ ಸುಲಭವಾಗಿ ಮಾತನಾಡುತ್ತಾರೆ. ಆದರೆ ನಾನು ಒಂದೇ ಭಾಷೆಗೆ ಅಂಟಿಕೊಂಡಿದ್ದೇನೆ. ಶಿವರಾಜ್ ಕುಮಾರ್ ಅವರು 5 ಭಾಷೆ ಮಾತನಾಡಲು ಬರುತ್ತದೆ ಎಂದು ತಿಳಿಸಿದ ವೇಳೆ ನನಗೂ ಅಷ್ಟು ಭಾಷೆ ಬರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತು. ಆದರೆ ಮುಂದಿನ ಬಾರಿ ಬೆಂಗಳೂರಿಗೆ ಬರುವ ವೇಳೆಗೆ ಖಂಡಿತ ಉತ್ತಮವಾಗಿ ಕನ್ನಡ ಮಾತನಾಡಲು ಕಲಿತು ಬರುತ್ತೇನೆ. ಎಲ್ಲಾ ಕನ್ನಡ ಅಭಿಮಾನಿಗಳಿಗೆ ನನ್ನ ಧನ್ಯವಾದ ಎಂದು ಕನ್ನಡದಲ್ಲೇ ಹೇಳಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಕನ್ನಡದಲ್ಲಿ ಸಿನಿಮಾ ಮಾಡುವ ಕುರಿತು ಉತ್ತರಿಸಿದ ವಿಜಯ್ ದೇವರಕೊಂಡ, ಕನ್ನಡ ಹಲವು ಸ್ಟಾರ್ ನಟರು ಈಗಾಗಲೇ ತೆಲುಗು, ತಮಿಳು ಸೇರಿದಂತೆ ವಿವಿಧ ರಂಗಗಳಲ್ಲಿ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದಾರೆ. ಆಗ ನಾವು ಏಕೆ ಕನ್ನಡ ಸಿನಿಮಾಗಳಲ್ಲಿ ಮಾಡಬಾರದು ಎನಿಸಿತು. ಅದ್ದರಿಂದ ನಾನು ಮೊದಲ ಪ್ರಯತ್ನವಾಗಿ ಕನ್ನಡದ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೇನೆ. ಈ ಜಾಹಿರಾತುಗಳಿಗೆ ನಾನೇ ಕನ್ನಡದಲ್ಲಿ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಸ್ಟಾರ್ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಸಿನಿಮಾ ಮಾಡುತ್ತಿದ್ದು, ಖಂಡಿತ ಕನ್ನಡ ಸಿನಿಮಾ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಾತನಾಡಿ, ಕಮಲ್ ಹಾಸನ್ ಅವರ ಬಳಿಕ ನಾನು ಇಷ್ಟ ಪಟ್ಟ ನಟ ವಿಜಯ್. ನನ್ನ ಮಗಳು ಕೂಡ ವಿಜಯ್ ಅವರ ಅಭಿಮಾನಿ. ಅವರ ಕೆಲ ಸಿನಿಮಾಗಳನ್ನು ನೋಡಿದ್ದು, ತಮ್ಮದೇ ವಿಭಿನ್ನ ರೀತಿಯಲ್ಲಿ ನಟಿಸಿದ್ದಾರೆ. ಅವರ ಮುಂದಿನ `ನೋಟಾ’ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *