ಜಗತ್ತು ಆಧುನಿಕತೆಯ ಹೊಸ ಆಯಾಮಗಳಿಗೆ ತೆರೆದುಕೊಂಡಷ್ಟು ಹೊಸ ಹೊಸ ಸಂಸ್ಕೃತಿಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮಾಡ್ರನ್ ಲೈಫ್‌ಸ್ಟೈಲ್‌ಗೆ ಬಹುಬೇಗ ತೆರೆದುಕೊಳ್ಳುತ್ತಿದ್ದಾರೆ. ಉದ್ಯೋಗ, ಹಣ ಗಳಿಕೆ, ಹೈಫೈ ಜೀವನದ ಕಡೆ ಹೆಚ್ಚು ಮುಖ ಮಾಡುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕ ಜೀವನ ವಿಧಾನ ದಿಕ್ಕು ತಪ್ಪಿದೆ. ಸುಂದರ ಸಂಸಾರ, ಕೌಟುಂಬಿಕ ಪದ್ಧತಿ ಈಗಾಗಲೇ ಹಲವು ದೇಶಗಳಲ್ಲಿ ನಶಿಸಿ ಹೋಗಿದೆ. ಈ ಪ್ರವೃತ್ತಿ ಸಂಪ್ರದಾಯಸ್ಥ ಕುಟುಂಬಗಳಿಗೆ ಸಮಸ್ಯೆಯಾಗಿ ಕಾಡುತ್ತಿದೆ.
ನೀವು ಬಾಡಿಗೆ ತಾಯ್ತನದ ಬಗ್ಗೆ ಕೇಳಿದ್ದೀರಾ.. ಅದೇ ರೀತಿ, ಪಾರ್ಟ್ನರನ್ನು (ಗೆಳೆಯ) ಬಾಡಿಗೆಗೆ (Renting Partner) ಪಡೆಯುವ ಬಗ್ಗೆ ಕೇಳಿದ್ದೀರಾ? ಹೌದು, ಅಂತಹದ್ದೊಂದು ಸಂಸ್ಕೃತಿ ವಿಯೆಟ್ನಾಂ (Vietnam) ದೇಶದಲ್ಲಿ ಚಾಲ್ತಿಯಲ್ಲಿದೆ. ಈ ದೇಶದ ಯುವತಿಯರು ಬಾಡಿಗೆಗೆ ಗೆಳೆಯನನ್ನು ಹೊಂದುತ್ತಿದ್ದಾರೆ. ಏನಿದು ಹೊಸ ಪ್ರವೃತ್ತಿ? ಈ ಟ್ರೆಂಡ್ ಯಾಕೆ? ಇದನ್ನೂ ಓದಿ: 16ನೇ ವರ್ಷಕ್ಕೆ ಸ್ಕೂಲ್ ಡ್ರಾಪ್‌ಔಟ್ – ಬಿಲಿಯನೇರ್, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!
ಬಾಡಿಗೆಗೆ ಬಾಯ್‌ಫ್ರೆಂಡ್!
ಷರತ್ತುಗಳೊಂದಿಗೆ ಒಂದು ನಿರ್ದಿಷ್ಟ ಅವಧಿವರೆಗೆ ತಿಂಗಳಿಗೆ ಇಂತಿಷ್ಟು ಹಣ ಅಂತ ಕೊಟ್ಟು ವ್ಯಕ್ತಿಯೊಬ್ಬನನ್ನು ಬಾಡಿಗೆಗೆ ಬಾಯ್‌ಫ್ರೆಂಡ್ ನೇಮಿಸಿಕೊಳ್ಳುವ ವಿಧಾನ ಇದಾಗಿದೆ. ಈಗಿನ ಯುವಜನರು ಬದುಕಿನಲ್ಲಿ ತಮ್ಮದೇ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ, ಕೆಲವೊಮ್ಮೆ ಪೋಷಕರು ಅದಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿರುತ್ತಾರೆ. ಈ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಯುವತಿಯರು ಕಂಡುಕೊಂಡಿರುವ ತಾತ್ಕಾಲಿಕ ಪರಿಹಾರದ ಮಾರ್ಗವಿದು.
ಯಾಕೆ ಈ ಟ್ರೆಂಡ್?
ಮಕ್ಕಳಿಗೆ ಬೇಗ ಮದುವೆ ಮಾಡಿ, ಮೊಮ್ಮಕ್ಕಳನ್ನು ನೋಡಬೇಕೆಂಬ ಆಸೆ ಬಹುತೇಕ ಪೋಷಕರದ್ದಾಗಿರುತ್ತದೆ. ಆದರೆ, ಈಗಿನ ಕಾಲದ ಹಲವು ಯುವತಿಯರು ಬೇಗ ಮದುವೆಯಾಗಲು ಇಷ್ಟಪಡುತ್ತಿಲ್ಲ. ಕುಟುಂಬದವರ ಒತ್ತಡವನ್ನು ನಿಭಾಯಿಸಲು ಕಂಡುಕೊಂಡಿರುವ ಮಾರ್ಗವೇ ‘ರೆಂಟೆಡ್ ಪಾರ್ಟ್ನರ್’ (ಬಾಡಿಗೆಗೆ ಗೆಳೆಯ). ಪೋಷಕರ ಆಸೆ ಪೂರೈಸಲು, ತಮ್ಮ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ಕೊಡಲು, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು, ತಾನು ಒಂಟಿ ಎಂಬ ಕಳಂಕದಿಂದ ತಪ್ಪಿಸಿಕೊಳ್ಳಲು ವಿಯೆಟ್ನಾಂನ ಅನೇಕ ಯುವತಿಯರು ಗೆಳೆಯನನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವೆಬ್‌ಸೈಟ್ ವರದಿ ಮಾಡಿದೆ. ಇದನ್ನೂ ಓದಿ: ಆಧ್ಯಾತ್ಮಿಕ ಶುದ್ಧೀಕರಣ ಕಾರ್ಯಕ್ರಮದಲ್ಲಿ ಕಪ್ಪೆಯ ವಿಷ ಸೇವಿಸಿ ಮೆಕ್ಸಿಕನ್ ನಟಿ ಸಾವು!
20 ಸಾವಿರಕ್ಕೂ ಹೆಚ್ಚು ಯುವಕರು ಸಕ್ರಿಯ
ಯುವತಿಯೊಂದಿಗೆ ಬಾಡಿಗೆ ಗೆಳೆಯನಾಗಿ ಹೋಗಿ ನಟಿಸುವುದು ಸುಲಭದ ಮಾತಲ್ಲ. ಅದಕ್ಕಾಗಿ ಸೂಕ್ತ ತರಬೇತಿಯ ಅಗತ್ಯವಿದೆ. ಆ ನಿಟ್ಟಿನಲ್ಲಿ ವಿಯೆಟ್ನಾಂನಲ್ಲಿ 20 ಸಾವಿರಕ್ಕೂ ಹೆಚ್ಚು ಯುವಕರು ಸಕ್ರಿಯರಾಗಿದ್ದಾರೆ. ತರಬೇತಿ ಕೂಡ ಪಡೆದುಕೊಳ್ಳುತ್ತಿದ್ದಾರೆ. ಒಳ್ಳೆಯ ಲುಕ್‌ಗಾಗಿ ಜಿಮ್‌ಗೆ ಹೋಗುವುದು, ಯುವತಿಯ ಮನೆಯವರನ್ನು ಸೆಳೆಯಲು ಯೋಗ-ಸಂಗೀತ ಕಲಿಯುತ್ತಾರೆ. ಜೊತೆಗೆ ಅಡುಗೆ ಮಾಡುವುದನ್ನು ಸಹ ಕಲಿಯುತ್ತಿದ್ದಾರೆ.
ಷರತ್ತುಗಳು ಅನ್ವಯ
ಇದೊಂದು ವೃತ್ತಿಯೇ ಆಗಿದ್ದು, ಅನೇಕ ಸೋಷಿಯಲ್ ಮೀಡಿಯಾ ವೇದಿಕೆಗಳು ನಿಭಾಯಿಸುತ್ತಿವೆ. ಬಾಡಿಗೆ ಪಡೆಯುವ ಯುವತಿಯರು ವಿಧಿಸುವ ಷರತ್ತುಗಳಿಗೆ ಅನ್ವಯವಾಗಿ ಯುವಕರನ್ನು ಬಾಡಿಗೆಗೆ ಕಳುಹಿಸಿಕೊಡಲಾಗುತ್ತದೆ. ಬಾಡಿಗೆ ಗೆಳೆಯನಾಗಿ ಹೋಗಲು ಬೇರೆ ಬೇರೆ ಸಂದರ್ಭಗಳಿಗೆ ಬೇರೆ ಬೇರೆ ತರನಾದ ದರಗಳನ್ನು ಟೀಂ ಮ್ಯಾನೇಜರ್‌ಗಳು ನಿರ್ಧರಿಸುತ್ತಾರೆ. ಬಹುತೇಕ ಒಪ್ಪಂದಗಳು ಭಾವನಾತ್ಮಕ ವಿಷಯ ಮತ್ತು ದೈಹಿಕ ಸಂಬಂಧಗಳನ್ನು ನಿಷೇಧಿಸುತ್ತವೆ.
ಯುವತಿಯರು ಹೇಳೋದೇನು?
ಬಾಡಿಗೆಗೆ ಪಾರ್ಟ್ನರ್‌ನನ್ನು ಪಡೆದಿರುವ 30 ವರ್ಷದ ಯುವತಿ ಮಿನ್ ಥು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ‘ನಾನು ನನಗಿಂತ ವಯಸ್ಸಿನಲ್ಲಿ ಹಿರಿಯನಾದ ವ್ಯಕ್ತಿಯನ್ನು 5 ವರ್ಷಕ್ಕೆ ಬಾಡಿಗೆಗೆ ಪಡೆದಿದ್ದೇನೆ. ಪ್ರತಿ ತಿಂಗಳು 16,936 ರೂ. (200 ಡಾಲರ್) ಹಣವನ್ನು ನೀಡುತ್ತೇನೆ. ಇದೊಂದು ಒಪ್ಪಂದ. ಇದರಿಂದ ನನಗೇನು ಸಮಸ್ಯೆ ಆಗಿಲ್ಲ. ಬಾಡಿಗೆ ಬಾಯ್‌ಫ್ರೆಂಡ್ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಅವರನ್ನು ಸಂತೋಷಗೊಳಿಸಿದ್ದಾನೆ. ಮನೆಯವರಿಗೆ ವಿಶೇಷ ಅಡುಗೆ ಕೂಡ ಮಾಡಿ ಬಡಿಸುತ್ತಾನೆ. ಕಾರ್ಯಕ್ರಮಗಳಿದ್ದಾಗ ಜೊತೆಗೆ ಬರುತ್ತಾನೆ. ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಜಾರಿಗೊಳಿಸಿದ್ದ ಸೇನಾಡಳಿತ ವಾಪಸ್
ಯುವಕರಿಗೆ ಹೊಸ ಉದ್ಯೋಗ
ಈ ಟ್ರೆಂಡ್ ಅನೇಕರಿಗೆ ವೈಯಕ್ತಿಕ ಪರಿಹಾರವಾಗಿದೆ. ವಿಯೆಟ್ನಾಂನಲ್ಲಿ ಕೆಲವು ಯುವರಿಗೆ ಇದು ಹೊಸ ಉದ್ಯೋಗವಾಗಿದೆ. ಹನೋಯ್‌ನ 25 ವಯಸ್ಸಿನ ಹುಯ್ ತುವಾನ್ ಪೂರ್ಣ ಪ್ರಮಾಣದಲ್ಲಿ ಇದೇ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾನೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತುವಾನ್‌ನನ್ನು ಹಲವು ಗ್ರಾಹಕರು (ಯುವತಿಯರು) ಕೌಟುಂಬಿಕ ಕಾರ್ಯಗಳಿಗಾಗಿ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಜೊತೆಯಾಗಿ ಕಾಫಿ-ಟೀ ಕುಡಿಯುವುದರಿಂದ ಹಿಡಿದು, ಕುಟುಂಬದವರೊಂದಿಗೆ ಕೂಟಗಳಲ್ಲಿ ಪಾಲ್ಗೊಳ್ಳುವ ವರೆಗೆ ಕೆಲಸಗಳಲ್ಲಿ ಯುವಕ ತೊಡಗಿಸಿಕೊಂಡಿದ್ದಾನೆ. ಎರಡು ಗಂಟೆಗಳ ಕಾಫಿ ಕೂಟ ಅಥವಾ ಶಾಂಪಿಂಗ್‌ಗೆ ಹೋಗಲು 1ರಿಂದ 2 ಲಕ್ಷ ವಿಯೆಟ್ನಾಮೀಸ್ ಡಾಂಗ್ (10-20 ಅಮೆರಿಕನ್ ಡಾಲರ್) ತೆಗೆದುಕೊಳ್ಳುತ್ತಾನೆ. ಕುಟುಂಬದ ಸಭೆಯಲ್ಲಿ ಭಾಗವಹಿಸಲು 10 ಲಕ್ಷ ವಿಯೆಟ್ನಾಮೀಸ್ ಡಾಂಗ್ (40 ಡಾಲರ್) ಕೊಡಬೇಕಾಗುತ್ತದೆ.
ಸಂಶೋಧಕರ ಸಲಹೆ ಏನು?
ಬಾಡಿಗೆಗೆ ಪಾರ್ಟ್ನರ್ ಪಡೆಯುವ ಯುವತಿಯರು ಎಚ್ಚರಿಕೆ ವಹಿಸಬೇಕು. ಇದೊಂದು ತಾತ್ಕಾಲಿಕ ಆಯ್ಕೆಯಷ್ಟೆ. ಈ ರೀತಿಯ ಪ್ರವೃತ್ತಿಯಿಂದ ಪ್ಲಸ್ ಮತ್ತು ಮೈನಸ್ ಎರಡೂ ಆಗಿದೆ. ಕೆಲ ಕೇಸ್‌ಗಳಲ್ಲಿ ಯುವತಿಯರು ತಾವು ಬಾಡಿಗೆಗೆ ಪಡೆದ ಬಾಯ್‌ಫ್ರೆಂಡನ ಗುಣಗಳನ್ನು ಇಷ್ಟ ಪಟ್ಟು ಮದುವೆಯಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಮಸ್ಯೆಗಳೂ ಆಗಿವೆ. ಒಂದು ವೇಳೆ ಇದು ನಾಟಕೀಯ ಸಂಬಂಧ ಎನ್ನುವುದು ಕುಟುಂಬಸ್ಥರಿಗೆ ಗೊತ್ತಾದರೆ ಸಮಸ್ಯೆಗಳು ಎದುರಾಗಬಹುದು. ಭಾವನಾತ್ಮಕ ಸಂಬಂಧದ ಮೇಲೆ ಭಾರಿ ಪರಿಣಾಮ ಬೀರಬಹುದು ಎನ್ನುತ್ತಾರೆ ಗುಯೇನ್ ಥಾಂಗ್ ಹಾ.
ಚೀನಾದಲ್ಲೂ ಯುವತಿಯರು ಬೇಗ ಮದುವೆಯಾಗ್ತಿಲ್ಲ
ಬಾಡಿಗೆಗೆ ಪಾರ್ಟ್ನರ್ ಪಡೆಯುವುದೇನು ಜಾಗತಿಕವಾಗಿ ಹೊಸ ಪ್ರವೃತ್ತಿಯಲ್ಲ. ಚೀನಾದಲ್ಲಿ ಬೇಗ ಮದುವೆಯಾಗುವ ಯುವತಿಯರ ಸಂಖ್ಯೆ ಕುಸಿತ ಕಂಡಿದೆ. 2023ರಲ್ಲಿ ಜೂನ್ ವರೆಗೆ ಕೇವಲ 30.43 ಲಕ್ಷ ಮಂದಿ ಮಾತ್ರ ಮದುವೆಗೆ ನೋಂದಾಯಿಸಿಕೊಂಡಿದ್ದಾರೆ. ಇದು ದಶಕದಲ್ಲೇ ಅತಿ ಕಡಿಮೆ ಸಂಖ್ಯೆ ಎಂದು ವರದಿಯಾಗಿದೆ. ವಿಯೆಟ್ನಾಂನಂತೆಯೇ ಚೀನಾದಲ್ಲೂ ಬಾಡಿಗೆಗೆ ಗೆಳೆಯರನ್ನು ಪಡೆಯುತ್ತಿದ್ದಾರೆ. ಹಬ್ಬಗಳು, ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ಬಾಡಿಗೆಗೆ ಪಾರ್ಟ್ನರ್‌ರನ್ನು ಪಡೆಯುತ್ತಿದ್ದಾರೆ. ಚೀನಾದಲ್ಲಿ ದಿನಕ್ಕೆ 1,000 ಯುವಾನ್ (11,653 ರೂಪಾಯಿ) ನೀಡುತ್ತಾರೆ.