ಡಾಲಿ ಧನಂಜಯ (Daali Dhananjay) ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಚಿತ್ರ ‘ವಿದ್ಯಾಪತಿ’ ನಾಳೆ ಅಂದರೆ, ಏಪ್ರಿಲ್ 10ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ನಾನಾ ಪಾತ್ರಗಳನ್ನು ಮಾಡುತ್ತಾ, ಇತ್ತೀಚಿನ ದಿನಗಳಲ್ಲಿ ನಟನಾಗಿ ನೆಲೆ ಕಂಡುಕೊಳ್ಳುತ್ತಿರುವ ನಾಗಭೂಷಣ್ (Nagabhushana) ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ಕಥೆ ಯಾವ ಥರದ್ದಿರಬಹುದೆಂಬ ಕುತೂಹಲ ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಮೂಲಕ ತಣಿದಿದೆ. ಆ ಮೂಲಕ ಜಾಹೀರಾಗಿದ್ದ ದೃಶ್ಯಗಳಲ್ಲಿನ ಕ್ವಾಲಿಟಿ, ವಿಭಿನ್ನ ಕಥಾನಕದ ಸುಳಿವುಗಳೇ ‘ವಿದ್ಯಾಪತಿ’ಯ ಸುತ್ತ ಗಾಢ ಕೌತುಕ ಮೂಡಿಕೊಳ್ಳುವಂತೆ ಮಾಡಿದೆ. ಹೇಳಿ ಕೇಳಿ ಇದು ಬೇಸಿಗೆ ರಜೆಯ ಕಾಲಮಾನ. ಈ ಘಳಿಗೆಯಲ್ಲಿ ಕುಟುಂಬ ಸಮೇತರಾಗಿ ಕೂತು ನೋಡುವಂಥ ಚಿತ್ರವಾಗಿಯೂ ‘ವಿದ್ಯಾಪತಿ’ ಗಮನ ಸೆಳೆದಿದೆ. ಇದನ್ನೂ ಓದಿ:ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!
ವಿದ್ಯಾಪತಿ ಚಿತ್ರವನ್ನು ಇಶಾಂ ಹಾಗೂ ಹಸೀನ್ ಸೇರಿ ನಿರ್ದೇಶನ ಮಾಡಿದ್ದಾರೆ. ನಾಗಭೂಷಣ್ ನಾಯಕರಾಗಿದ್ದಾರೆ ಅಂದಮೇಲೆ ಅಲ್ಲಿ ಹಾಸ್ಯದ ಇರುವಿಕೆ ಇರುತ್ತದೆಂದೇ ಅರ್ಥ. ‘ವಿದ್ಯಾಪತಿ’ ಚಿತ್ರದಲ್ಲಿ ಎಲ್ಲಿಯೂ ಮುಜುಗರ ತಂದೊಡ್ಡದ ಎಚ್ಚರಿಕೆಯಿಂದಲೇ ಭರಪೂರ ಮನರಂಜನೆ ನೀಡುವ ಫಾರ್ಮುಲಾವನ್ನು ಪ್ರಯೋಗಿಸಲಾಗಿದೆ. ಅದರ ಸ್ಪಷ್ಟ ಸೂಚನೆ ಟ್ರೈಲರ್‌ನಲ್ಲಿ ಕಾಣಿಸಿದೆ. ‘ಹಿಟ್ಲರ್ ಸೀರಿಯಲ್’ ಮೂಲಕ ಪ್ರಸಿದ್ಧಿ ಪಡೆದುಕೊಂಡು, ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮಲೈಕಾ ವಸುಪಾಲ್ (Malaika Vasupal) ಈ ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ, ನಾನಾ ಚಹರೆಗಳನ್ನು ಒಳಗೊಂಡಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಗಭೂಷಣ್‌ಗೂ ಕೂಡ ಅವರೇ ಹೇಳಿಕೊಂಡಂತೆ ಬೋನಸ್ ನಂಥಾ ಚೆಂದದ ಪಾತ್ರವೇ ಸಿಕ್ಕಿದೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!
ಸಾಮಾನ್ಯವಾಗಿ, ಬೇಸಿಗೆ ರಜೆ ಬರುತ್ತಲೇ ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ತೆರಳುವ ಕ್ರೇಜ್ ಮೂಡಿಕೊಳ್ಳುತ್ತದೆ. ಈ ಬಾರಿ ಆ ಕ್ರೇಜ್ ಅನ್ನು ‘ವಿದ್ಯಾಪತಿ’ ಚಿತ್ರ ನೂರ್ಮಡಿಗೊಳಿಸಲಿದೆ. ಇಶಾಂ ಹಾಗೂ ಹಸೀಮ್ ನಿರ್ದೇಶನದೊಂದಿಗೆ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ (Daali Dhananjay) ಆಸೆಯಿಂದ ನಿರ್ಮಾಣ ಮಾಡಿರುವ ಈ ಸಿನಿಮಾ ಏ.10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ.