ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

Public TV
2 Min Read
VIDHANA SOUDHA

ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧ (Vidhana Soudha) ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಹೀಗಾಗಿ ಶಕ್ತಿಸೌಧವನ್ನ ದೂರದಿಂದಲೇ ನೋಡಿ.. ಫೋಟೋ ಕ್ಲಿಕ್ಕಿಸಿ ಸಂತಸಪಟ್ಟುಕೊಳ್ಳುತ್ತಿದ್ದ ಜನರಿಗೆ ಹತ್ತಿರದಿಂದಲೇ ನೋಡುವ ಅವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ʻಗೈಡೆಡ್ ಟೂರ್ʼ (Guided Tour) ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ.

ನಿತ್ಯ 25 ರಿಂದ 30 ಸದಸ್ಯರ 10 ಬ್ಯಾಚ್‌ಗಳಿಗೆ ವೀಕ್ಷಣೆಗೆ ಅವಕಾಶ ಇರುತ್ತದೆ. ಇಂದಿನಿಂದ ಗೈಡೆಡ್‌ ಟೂರ್‌ ಶುರುವಾಗಿದ್ದು, ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಭವ್ಯ ಮೆಟ್ಟಿಲುಗಳ ವಿವರಣೆ ಕೊಡುವ ಕೆಲಸವನ್ನ ಮಾರ್ಗದರ್ಶಿಗಳು ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ – ಬೋನ್ ಅಳವಡಿಸಿ ಪತ್ತೆ ಕಾರ್ಯಾಚರಣೆ

Guided tour of Vidhana Soudha 1

ಗುರುತಿನ ಚೀಟಿ ಕಡ್ಡಾಯ?
ವಿಧಾನಸೌಧದ ಮಹತ್ವವನ್ನು ಪ್ರವಾಸಿಗರಿಗೆ ತಿಳಿಸಿಕೊಡಲು ಸದ್ಯ 10 ಗೈಡ್‌ಗಳನ್ನ ನೇಮಕ ಮಾಡಿಕೊಳ್ಳಲಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳ ಪ್ರವಾಸಿಗರೂ ವಿಧಾನಸೌಧ ವೀಕ್ಷಣೆಗೆ ಬರ್ತಿದ್ದಾರೆ. ವಿಧಾನಸೌಧ ಪ್ರವಾಸಕ್ಕೆ ಪ್ರತಿ ಬ್ಯಾಚ್‌ಗೂ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ನಡಿಗೆ ಇರಲಿದೆ. ವಿಕಾಸಸೌಧದ ಎಂಟ್ರಿ ಗೇಟ್ (ನಂಬರ್ 3) ಮೂಲಕ ಟೂರ್ ಆರಂಭವಾಗಲಿದೆ. 20 ನಿಮಿಷ ಮುಂಚೆ ಟೂರ್ ಆರಂಭಕ್ಕೂ ಮುನ್ನ ಹಾಜರಿರಬೇಕು, ಟಿಕೆಟ್ ಬುಕ್ ಮಾಡಿದವರು ಸರ್ಕಾರ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿ ತರಬೇಕು. ವಿಧಾನಸೌಧ ಟೂರ್ ವೇಳೆ ನಿಗದಿತ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶ.

Guided tour of Vidhana Soudha

ಟಿಕೆಟ್‌ ದರ ಎಷ್ಟು?
ಪ್ರತೀ ಪ್ರವಾಸಿಗರಿಗೂ ತಲಾ 50 ರೂ. ಟಿಕೆಟ್‌ ನಿಗದಿ ಮಾಡಲಾಗಿದೆ. ಇನ್ನೂ 15 ವರ್ಷದೊಳಗಿನ ಮಕ್ಕಳು, ಎಸ್‌ಎಸ್‌ಎಲ್‌ಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ಇದನ್ನೂ ಓದಿ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ ಕೇಸ್ – ಓರ್ವ ಅಪ್ರಾಪ್ತ ಸೇರಿ ಇಬ್ಬರ ಬಂಧನ

Vidhana Soudha

ಕಳೆದ ವಾರವಷ್ಟೇ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಭಾಪತಿ ಹೊತಟ್ಟಿಯವರು ಗೈಡೆಡ್‌ ಟೂರ್‌ಗೆ ಚಾಲನೆ ನೀಡಿದ್ದರು. ಬೆಂದಕಾಳೂರಿನ ಹೆಗ್ಗುರುತು, ರಾಜ್ಯದ ಆಡಳಿತ ಶಕ್ತಿಸೌಧ ಅಂತನೇ ಕರೆಯಿಸಿಕೊಳ್ಳುವ ವಿಧಾನಸೌಧ ಈಗ ಪ್ರವಾಸಿ ತಾಣ. ಇಲ್ಲಿಯವರೆಗೂ ಕೇವಲ ಗೇಟ್ ಹೊರಭಾಗದಿಂದ, ರಸ್ತೆಯಿಂದ ಕಾಣಿಸುತ್ತಿದ್ದ ವಿಧಾನಸೌಧ ಇನ್ಮುಂದೆ ಪ್ರವಾಸಿ ಸ್ಥಳ ಆಗಲಿದೆ. ಗೈಡೆಡ್ ಟೂರ್ ಹೆಸರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸರ್ಕಾರ ಅವಕಾಶ ನೀಡಿದೆ‌. ಇನ್ಮುಂದೆ ವಿಧಾನಸೌಧದ ಒಳಗೆ ಹೋಗಿ ಭವ್ಯ ಐತಿಹಾಸಿಕ ಕಟ್ಟಡವನ್ನು ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ: Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

Share This Article