– ಕೊರೊನಾ ನಡುವೆಯೂ ಹಿರಿಯ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಪ್ರಧಾನಿ
ಶಿವಮೊಗ್ಗ: ಕೊರೊನಾ ಒತ್ತಡದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಹಿರಿಯ ಕಾರ್ಯಕರ್ತರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಅದೇ ರೀತಿ ಇಂದು ವಿಧಾನ ಪರಿಷತ್ ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರಿಗೆ ಪ್ರಧಾನಿಯವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು, ಶಂಕರಮೂರ್ತಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಮುಂಜಾನೆ 8.45ರ ಸಮಯದಲ್ಲಿ ಮನೆಯಲ್ಲಿ ಪತ್ರಿಕೆ ಓದುತ್ತಿದ್ದೆ. ಈ ವೇಳೆ ನನ್ನ ಮೊಬೈಲ್ ಗೆ ಒಂದು ದೂರವಾಣಿ ಕರೆ ಬಂತು. ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರು ಡಿ.ಎಚ್ ಶಂಕರಮೂರ್ತಿ ಅವರಿಗೆ ಕೊಡಿ ಅಂದರು. ನಾನು ನಾನೇ ಶಂಕರಮೂರ್ತಿ ಮಾತನಾಡುತ್ತಿದ್ದೇನೆ ಹೇಳಿ ಎಂದೆ. ಪ್ರಧಾನಮಂತ್ರಿ ಅವರ ಕಚೇರಿಯಿಂದ ಮಾತನಾಡುತ್ತಿದ್ದೇನೆ. ಪ್ರಧಾನಿಯವರು ತಮ್ಮ ಜೊತೆ ಮಾತನಾಡಬೇಕಂತೆ. ಇನ್ನು ಐದು ನಿಮಿಷದಲ್ಲಿ ಕರೆ ಬರಬಹುದು ತಮ್ಮ ಮೊಬೈಲ್ ಬ್ಯುಸಿ ಇಟ್ಟುಕೊಳ್ಳಬೇಡಿ ಎಂದರು.
ನನಗೆ ಒಂದು ರೀತಿ ಆಶ್ಚರ್ಯ ಹಾಗೂ ಅನುಮಾನ ಕಾಡಿತು. ಇಂತಹ ಸಮಯದಲ್ಲಿ ಪ್ರಧಾನಿಯವರು ನನಗೆ ಕರೆ ಮಾಡುತ್ತಾರಾ ಅಂದುಕೊಂಡು ಸುಮ್ಮನಾದೆ. ಆದರೆ ನಾನು ಮೊದಲು ಮಾತನಾಡಿದವರ ಜೊತೆ ಮೊಬೈಲ್ ಇಟ್ಟು ಐದು ನಿಮಿಷದ ನಂತರದಲ್ಲಿಯೇ ಫೋನ್ ಬಂತು. ಆ ಕಡೆಯಿಂದ ಸ್ವತಃ ಪ್ರಧಾನಿಯವರೇ ಮಾತನಾಡಿದರು.
ಪೋನ್ ಮಾಡಿದವರೇ ಮೋದಿಯವರು, ಶಂಕರಮೂರ್ತಿ ಅವರೇ ಹೇಗಿದ್ದೀರಿ. ಕೊರೊನಾ ಸಮಯದಲ್ಲಿ ನಿಮ್ಮ ಆರೋಗ್ಯ ಹೇಗೆ ನೋಡಿಕೊಳ್ಳುತ್ತಿದ್ದೀರಿ. ಈ ವೇಳೆ ಸಮಯ ಹೇಗೆ ಕಳೆಯುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೇ ನಿಮ್ಮ ಧ್ವನಿ ಕೇಳಿದರೆ ನೀವು ಆರೋಗ್ಯವಾಗಿದ್ದೀರಿ ಅನಿಸುತ್ತೆ ಅಂದರು.
ಆಗ ನಾನು ಕೊರೊನಾ ಸಮಯದಲ್ಲಿ ಮನೆಯಿಂದ ಹೊರಗೆ ಎಲ್ಲಿಯೂ ಹೋಗುತ್ತಿಲ್ಲ. ಮನೆಯಲ್ಲಿಯೇ ಪುಸ್ತಕ, ಪತ್ರಿಕೆ ಓದುತ್ತಿದ್ದೇನೆ. ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದೇನೆ. ಆ ಮೂಲಕವೇ ಹೊರಗಡೆ ನಡೆಯುವ ವಿಷಯ ತಿಳಿದುಕೊಳ್ಳುತ್ತಿದ್ದೇನೆ. ಅಲ್ಲದೆ ನನಗೆ ದೂರವಾಣಿ ಮೂಲಕ ಯಾರಾದರೂ ಸಹಾಯ ಕೇಳಿದರೆ ಮನೆಯಿಂದಲೇ ಅಂತಹವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.
ಕೊರೊನಾ ನಡುವೆಯೂ ನನಗೆ ದೂರವಾಣಿ ಕರೆ ಮಾಡುತ್ತಾರೆ. ನನ್ನ ಆರೋಗ್ಯ ವಿಚಾರಿಸುತ್ತಾರೆ ಅಂದರೆ ನಿಜಕ್ಕೂ ಮೋದಿ ದೊಡ್ಡ ವ್ಯಕ್ತಿ. ಪ್ರಧಾನಿ ಅವರಿಂದ ನಾನು ದೂರವಾಣಿ ಕರೆ ನಿರೀಕ್ಷಿಸಿರಲಿಲ್ಲ. ಅವರು ನನಗೆ ಫೋನ್ ಮಾಡಿ ನನ್ನ ಬಗ್ಗೆ, ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದು, ವಿಚಾರಿಸಿದ್ದು ನನಗೆ ತುಂಬ ಖುಷಿಯಾಯ್ತು ಎಂದು ಶಂಕರಮೂರ್ತಿ ತಿಳಿಸಿದರು.