ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ನೀವು ಸಿಎಂ ಆದ್ರಾ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪ್ರಶ್ನಿಸಿ, ಸದನದಲ್ಲಿ ನಗೆ ಹರಿಸಿದರು.
ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಶಾಸಕ ಜಿ.ಟಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಟೀ ಮಾರಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಾಲ್ಯದಲ್ಲಿ ನಿಂಬೆಹಣ್ಣು ಮಾರಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಎಮ್ಮೆ ಮೇಯಿಸಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ರೈತ ಕುಟುಂಬದಿಂದ ಬಂದು ಹಲವು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೂ ಭ್ರಷ್ಟಾಚಾರ, ಜಾತಿ ವ್ಯವಸ್ಥೆಯಲ್ಲಿ ಏನು ಬದಲಾಗಿಲ್ಲ, ಏಕೆ ಬದಲಾಗಿಲ್ಲ ಎಂದು ಪ್ರಶ್ನಿಸಿದರು.
Advertisement
Advertisement
ಈ ವೇಳೆ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಅವರು ಮಧ್ಯಪ್ರವೇಶಿಸಿ, ಬಹುಶಃ ಅದೇ ನಿಂಬೆಹಣ್ಣನ್ನು ಸಿಎಂ ಯಡಿಯೂರಪ್ಪ ಅವರು ಮಾಜಿ ಸಚಿವ ರೇವಣ್ಣ ಅವರಿಗೆ ಕೊಟ್ಟಿರಬಹುದಾ? ಈ ಬಗ್ಗೆ ಅವರು ಸ್ವಲ್ಪ ಸ್ಪಷ್ಟನೆ ಕೊಡಲಿ ಎಂದು ಕಾಲೆಳೆದರು.
Advertisement
ರಮೇಶ್ ಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈಗ ರೇವಣ್ಣ ಸದನದಲ್ಲಿ ಇಲ್ಲ, ಅವರು ಬಂದ ನಂತರ ಹೇಳಿ ಎಂದು ಸೂಚನೆ ನೀಡಿದರು. ಆಗ ರಮೇಶ್ ಕುಮಾರ್ ಅವರು, ಅಲ್ಲ… ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ನೀವು ಮುಖ್ಯಮಂತ್ರಿ ಆಗಿಬಿಟ್ರಲ್ಲಾ ಎಂದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತು. ಸದನದಲ್ಲಿ ಇದ್ದರೂ ಸಿಎಂ ಯಡಿಯೂರಪ್ಪ ಅವರು ರಮೇಶ್ ಕುಮಾರ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ.