– ಕಾಂಗ್ರೆಸ್‌ಗೆ 11 ಹೆಚ್ಚುವರಿ ಮತ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ (Vidhan Parishad Election) ಬಿಜೆಪಿಯಿಂದ (BJP) ಅಡ್ಡ ಮತದಾನ ನಡೆದಿದ್ದಕ್ಕೆ ಹೈಕಮಾಂಡ್ ನಾಯಕರು ರಾಜ್ಯ ನಾಯಕರ ಮೇಲೆ ಗರಂ ಆಗಿದ್ದಾರೆ.
ಬಿಜೆಪಿ– ಜೆಡಿಎಸ್ ಶಾಸಕರ ಅಡ್ಡ ಮತದಾನ ಮಾಡಿದ ಪರಿಣಾಮ ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ 11 ಮತಗಳು ಬಂದಿದ್ದು ದೋಸ್ತಿಗೆ ಬಿಗ್ ಶಾಕ್ ಸಿಕ್ಕಿದೆ. ಬಿಜೆಪಿ ಅಡ್ಡ ಮತದಾನ ಮಾಡಿದ್ದಕ್ಕೆ ರಾಜ್ಯ ನಾಯಕರ ಮೇಲೆ ಹೈಕಮಾಂಡ್ ಕೆಂಡಾಮಂಡಲವಾಗಿದ್ದು ವರದಿ ನೀಡುವಂತೆ ಸೂಚಿಸಿದೆ.
ಪರಿಷತ್ ಚುನಾವಣೆಯಲ್ಲಿ ತಮ್ಮ ಶಾಸಕರ ಮತಗಳು ಅಸಿಂಧು ಆಗಬಾರದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದವು. ಅದರಲ್ಲೂ ಕಾಂಗ್ರೆಸ್ ಅಣುಕು ಮತದಾನ ಮಾಡಿ ಶಾಸಕರಿಗೆ ವೋಟಿನ ಬಗ್ಗೆ ಪಾಠ ಮಾಡಿತ್ತು.
ಇನ್ನೊಂದು ಕಡೆ ಬಿಜೆಪಿ ಶಾಸಕರ ಮೇಲೆ ನಂಬಿಕೆ ಮತ್ತು ಅಡ್ಡ ಮತದಾನದ ಭೀತಿ ಇರದ ಕಾರಣ ರೆಸಾರ್ಟ್ ಕರೆದುಕೊಂಡು ಹೋಗಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ಶಾಕ್ ಆಗಿದೆ. ನಿರ್ಲಕ್ಷ್ಯ, ಅನಾಸಕ್ತಿ, ಎದ್ದು ಕಾಣಿಸಿದ ಒಗ್ಗಟ್ಟಿನ ಕೊರತೆಯಿಂದ ದೊಡ್ಡ ಪೆಟ್ಟು ತಿಂದಿದೆ.
ವಿಧಾನಸಭೆಯಲ್ಲಿ 62 ಶಾಸಕರ ಬೆಂಬಲ ಹೊಂದಿರುವ ಬಿಜೆಪಿಗೆ ತನ್ನ ಇಬ್ಬರು ಅಭ್ಯರ್ಥಿ ಗೆಲ್ಲಲು 56 ಮತಗಳ ಬೇಕಾಗಿತ್ತು. ಆದರೆ ಅಡ್ಡ ಮತದಾನದ ಭೀತಿಯಿಂದ ಕೊನೆಯ ಕ್ಷಣದಲ್ಲಿ ತನ್ನ ತಂತ್ರಗಾರಿಕೆ ಬದಲಾಯಿಸಿ ತಲಾ 30 ಮತ ಹಾಕಲು ನಿರ್ಧರಿಸಿತ್ತು. ಅದರಂತೆ ತಲಾ 30 ಶಾಸಕರ ಎರಡು ಗುಂಪು ಮಾಡಿ ಮತ ಚಲಾವಣೆಗೆ ಸೂಚಿಸಿತ್ತು.
ರಘು ಕೌಟಿಲ್ಯ ಅವರಿಗೆ 29 ಮತಗಳು ಬಿದ್ದರೆ ಒಂದು ವೋಟ್ ಅಸಿಂಧು ಆಗಿದೆ. ಲಿಂಗರಾಜ ಪಾಟೀಲ್‌ಗೆ 27 ಶಾಸಕರು ಮಾತ್ರ ಮತ ಹಾಕಿದ್ದು ಮೂವರು ಅಡ್ಡ ಮತದಾನ ಮಾಡಿದ್ದಾರೆ. ಚಂದ್ರು ಲಮಾಣಿ, ದುರ್ಯೋಧನ ಐಹೊಳೆ, ಕೃಷ್ಣ ನಾಯಕ್, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವಂತೆ ಸೂಚಿಸಲಾಗಿತ್ತು.
ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜ್ ಅವರಿಗೆ ನಿಗದಿ ಪ್ರಕಾರ 18 ಮತಗಳು ಬೀಳಬೇಕಿತ್ತು. ಆದರೆ ಕೇವಲ 14 ಮತಗಳು ಮಾತ್ರ ಬಿದ್ದಿದೆ. ಪರಿಷತ್ ಚುನಾವಣೆ ಗೌಪ್ಯವಾಗಿ ನಡೆಯುವ ಕಾರಣ ಯಾರು ಅಡ್ಡ ಮತದಾನ ಮಾಡಿದ್ದಾರೆ ಎನ್ನುವುದು ತಿಳಿಯುವುದು ಕಷ್ಟವಾಗಿದೆ.
ಯಾರಿಗೆ ಎಷ್ಟು ಮತ?
135 ಶಾಸಕರು ಇರುವ ಕಾಂಗ್ರೆಸ್‌ಗೆ 151 ಮತಗಳು ಬಿದ್ದರೆ, 62 ಶಾಸಕರು ಇರುವ ಬಿಜೆಪಿಗೆ 56 ಮತ, 18 ಶಾಸಕರು ಇರುವ ಜೆಡಿಎಸ್‌ಗೆ 14 ಮತಗಳು ಬಿದ್ದಿದೆ. ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ಗೆ ಅಧಿಕೃತವಾಗಿ 135, 2 ಸಹ ಸದಸ್ಯರು, 1 ಸರ್ವೋದಯ ಕರ್ನಾಟಕ ಹಾಗೂ ಬಿಜೆಪಿಯ ಉಚ್ಛಾಟಿತ ಇಬ್ಬರು ಶಾಸಕರ ಮತಗಳು ಸೇರಿ ಒಟ್ಟು 140 ಮತಗಳಷ್ಟೇ ಬೀಳಬೇಕಿತ್ತು. ಆದರೆ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ನಿರೀಕ್ಷೆಗೂ ಮೀರಿ 32 ಮತಗಳನ್ನು ಪಡೆದು ಎಲ್ಲರನ್ನು ಹುಬ್ಬೇರಿಸಿದ್ದಾರೆ.
ಬಿಜೆಪಿಯ ಒಬ್ಬ ಶಾಸಕರ ಮತ ಅಸಿಂಧುವಾಗಿದೆ. ಈ ಲೆಕ್ಕಾಚಾರದ (ಅಸಿಂಧು ಬಿಟ್ಟು) ಪ್ರಕಾರ ಕಾಂಗ್ರೆಸ್‌ಗೆ 10 ಹೆಚ್ಚುವರಿ ಮತ ಸಿಕ್ಕಂತಾಗುತ್ತದೆ. ಆದರೆ ಕಾಂಗ್ರೆಸ್‌ಗೆ 11 ಹೆಚ್ಚುವರಿ ಮತ ಸಿಕ್ಕಿರುವುದರಿಂದ ಇನ್ನೂ ಒಂದು ಹೆಚ್ಚುವರಿ ಮತ ಬಿಜೆಪಿಯಿಂದ ಹೋಗಿದೆಯೇ ಅಥವಾ ಜೆಡಿಎಸ್‌ನಿಂದ ಹೋಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ, ಶಾಸಕರ ಒಗ್ಗಟ್ಟು ಮತ್ತು ಪಕ್ಷ ನಿಷ್ಠೆಯ ಪರೀಕ್ಷೆಗೆಂದು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಮಿತ್ರ ಪಕ್ಷ ಬಿಜೆಪಿ ತನ್ನ ಹೆಚ್ಚುವರಿ ಮತಗಳನ್ನು ಎಷ್ಟು ಪರಿಣಾಮಕಾರಿಯಾಗಿ ವರ್ಗಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದರು.
