ಬೆಂಗಳೂರು: ವಿಧಾನ ಪರಿಷತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ಸಿಎಂ-ಡಿಸಿಎಂ ಹಾಗೂ ಹೈಕಮಾಂಡ್ ನಾಯಕರ ನಡುವೆ ಒಮ್ಮತ ಮೂಡಿಲ್ಲ. ಭಿನ್ನಾಭಿಪ್ರಾಯಗಳ ನಡುವೆಯೂ ಮೂವರ ಹೆಸರು ಅಂತಿಮವಾಗಿದೆ. ಉಳಿದ ನಾಲ್ಕು ಹೆಸರು ಅಂತಿಮಪಡಿಸಲು ಸಿಎಂ-ಡಿಸಿಎಂ ನಡುವೆಯೂ ಪೈಪೋಟಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಎಂ-ಡಿಸಿಎಂ ಒಪ್ಪಿದ ಹೆಸರಿಗೆ ವೇಣುಗೋಪಾಲ್ (KC Venugopal) ಹಾಗೂ ಸುರ್ಜೆವಾಲಾ ಅವರಿಂದಲೂ ವಿರೋಧ ವ್ಯಕ್ತವಾಗಿದೆ. ವೇಣುಗೋಪಾಲ್, ಸುರ್ಜೆವಾಲ ಮಾಡಿದ ಕಾರ್ಯಕರ್ತರ ಪಟ್ಟಿಗೆ ಮಲ್ಲಿಕಾರ್ಜುನ ಖರ್ಗೆ ಬ್ರೇಕ್ ಹಾಕಿದ್ದಾರೆ. 7 ಸ್ಥಾನದ ಪರಿಷತ್ ಟಿಕೆಟ್ ಆಯ್ಕೆ ಎಐಸಿಸಿ ಮಟ್ಟದಲ್ಲಿಯೇ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಗೊಂದಲದ ನಡುವೆ 7 ಸ್ಥಾನದ ಪೈಕಿ ಮೂವರ ಹೆಸರು ಅಂತಿಮಪಡಿಸಲಾಗಿದೆ ಎನ್ನಲಾಗುತ್ತಿದೆ.
ಇಸ್ಮಾಯಿಲ್ ತಮಟಗಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್ ಹಾಗೂ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೆಸರು ಬಹುತೇಕ ಅಂತಿಮ ಎನ್ನಲಾಗಿದೆ. ಒಕ್ಕಲಿಗ ಕೋಟಾದಲ್ಲಿ ಎರಡು ಸ್ಥಾನ ಕೊಡಲು ಹೈಕಮಾಂಡ್ ಒಲವು ತೋರಿದ್ದರು. ಡಿಸಿಎಂ ಡಿಕೆಶಿ ವಿನಯ್ ಕಾರ್ತಿಕ್ ಪರ, ಸಿಎಂ ಸಿದ್ದರಾಮಯ್ಯ ಅವರು ಗೋವಿಂದರಾಜು ಪರ ಒಲವು ತೋರಿದ್ದಾರೆ ಎನ್ನಲಾಗಿದೆ. ಗೋವಿಂದರಾಜು ಅಥವಾ ವಿನಯ್ ಕಾರ್ತಿಕ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ, ಇನ್ನೊಂದು ಸ್ಥಾನ ಕಾರ್ಯಕರ್ತರಿಗೆ ಕೊಡಬೇಕು ಎಂದು ವೇಣುಗೋಪಾಲ್ ಹಾಗೂ ಸುರ್ಜೆವಾಲಾ ಪಟ್ಟು ಹಿಡಿದಿದ್ದಾರೆ. ಆದರೆ ಸಿಎಂ ಹಾಗೂ ಡಿಸಿಎಂ ತಮ್ಮ ಬೆಂಬಲಿಗರ ಪರ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡಾ. ಯತೀಂದ್ರಗೆ ಎಂಎಲ್‍ಸಿ ಟಿಕೆಟ್ ಫಿಕ್ಸ್
ಇನ್ನೊಂದು ಕಡೆ ಸಚಿವ ಬೋಸರಾಜು ಮುಂದುವರಿಕೆ ಬಗ್ಗೆಯೂ ಕೈ ನಾಯಕರಲ್ಲಿ ಒಮ್ಮತ ಮೂಡಿಲ್ಲ. ಸುರ್ಜೆವಾಲ ಹಾಗೂ ವೇಣುಗೋಪಾಲ್ 10 ಕಾರ್ಯಕರ್ತರ ಪಟ್ಟಿ ಮಾಡಿಕೊಂಡು ಅದರಲ್ಲಿ 4 ಸ್ಥಾನದ ಆಯ್ಕೆ ಬಗ್ಗೆ ರಾಜ್ಯ ನಾಯಕರ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ. ಆದರೆ ಈ ಪಟ್ಟಿಗೆ ಸಿಎಂ ಹಾಗೂ ಡಿಸಿಎಂ ಒಪ್ಪುತ್ತಿಲ್ಲ ಎನ್ನಲಾಗಿದೆ. ಲೋಕಸಭೆಯಲ್ಲಿ 6 ಮಹಿಳೆಯರಿಗೆ ಅವಕಾಶ ಕೊಟ್ಟಿರುವುದರಿಂದ ಪರಿಷತ್ ನಲ್ಲಿ ಮಹಿಳೆಯರಿಗೆ ಅವಕಾಶ ಬೇಡ ಎಂಬುದು ಎಐಸಿಸಿ ನಾಯಕರ ನಿಲುವು ಎನ್ನಲಾಗಿದೆ.
ಎಐಸಿಸಿ ನಾಯಕರ ಈ ನಿಲುವು ಖಂಡಿಸಿ ಕೆಲವು ಮಹಿಳಾ ನಾಯಕಿಯರು ಪ್ರಿಯಾಂಕ ಗಾಂಧಿ ಹಾಗೂ ಸೋನಿಯ ಗಾಂಧಿ ಭೇಟಿಗೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. 7 ಸ್ಥಾನಕ್ಕೆ 3 ಹೆಸರು ಬಹುತೇಕ ಅಂತಿಮವಾಗಿದ್ದು ಉಳಿದ 4 ಸ್ಥಾನದ ಆಯ್ಕೆಗೆ ಎಐಸಿಸಿ ಹಾಗೂ ರಾಜ್ಯ ನಾಯಕರ ನಡುವೆಯೇ ಒಮ್ಮತ ಮೂಡುತ್ತಿಲ್ಲ ಎನ್ನಲಾಗಿದೆ.