ಬೆಂಗಳೂರು:‘ಟಗರು’ ಚಿತ್ರದ ಮೂಲಕ ಡಾಲಿ ಎಂದೇ ಖ್ಯಾತಿಗೊಂಡಿರುವ ಧನಂಜಯ್ ಅವರಿಗೆ ಇದೇ 23ರಂದು ಹುಟ್ಟುಹಬ್ಬವಿದ್ದು, ಆದ್ರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ ಅಂತ ನಟ ಧನಂಜಯ್ ಹೇಳಿದ್ದಾರೆ.
ಈ ಕುರಿತು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಒಂದು ವಿಡಿಯೋವನ್ನು ಹಾಕಿದ್ದಾರೆ. ಅದರಲ್ಲಿ `ಎಲ್ಲರಿಗೂ ನಮಸ್ಕಾರ, ನಾನು ಸುಮಾರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡಿತ್ತಿದ್ದೇನೆ. ಅಭಿಮಾನಿಗಳು 22 ರಾತ್ರಿ ಹಾಗೂ 23ರಂದು ಡಾಲಿ ಡೇ ಎಂದು ಆಚರಿಸಲು ರೆಡಿ ಆಗುತ್ತಿದ್ದೀರಾ. ಆದರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ. ನನ್ನ ಹುಟ್ಟುಹಬ್ಬ ಆಚರಿಸಲು ನೀವು ಕಾತುರರಾಗಿದ್ದೀರಾ ಹಾಗೂ ಖುಷಿಯಾಗಿದ್ದೀರಾ ಎಂದು ಗೊತ್ತಾಗುತ್ತದೆ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗುತ್ತಿರುವುದು ನೋಡುತ್ತಿದ್ದೀರಾ. ಇತಂಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಅಲ್ಲದೇ ನಾನು ಹುಟ್ಟುಹಬ್ಬ ಆಚರಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವಂತಹ ಸಮಯ’ ಎಂದು ತಿಳಿಸಿದ್ದಾರೆ.
`ನನಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಾವುದೇ ಆಸಕ್ತಿ ಇಲ್ಲ. ನಿಮಗೆ ನಾನು ಸಿಗಲೇ ಬೇಕೆಂದರೆ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ. ಆದರೆ ಆ ದಿನದಂದು ನೀವು ಕೇಕ್, ಹೂವಿನ ಹಾರ, ಪಟಾಕಿ ಸಂಭ್ರಮಗಳಿಲ್ಲದೇ ಬಂದು, ಆ ದಿನ ಹಣವನ್ನು ಸಂಗ್ರಹಿಸಿ. ಆ ಹಣವನ್ನು ನೀವು ಕೇರಳ ಹಾಗೂ ಕೊಡಗು ಸಂತ್ರಸ್ತರಿಗೆ ತಲುಪಿಸುವುದಾದರೆ, ನೀವು ಕರೆದ ಜಾಗಕ್ಕೆ ಬಂದು ನಿಮ್ಮ ಜೊತೆ ಮಾತನಾಡಿ, ಫೋಟೋ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
`ಡಾಲಿ ಡೇ ದಿನಕ್ಕೆ ನೀವು ಅರ್ಥ ಕೊಡಬೇಕಾದರೆ ನನ್ನನ್ನು ಭೇಟಿ ಮಾಡಬಹುದು. ಆದರೆ ಆ ದಿನ ನಿಮ್ಮ ಕೈಲಾದಷ್ಟು ಅಂದರೆ 5 ರೂ., 10 ರೂ. ನೀಡಬಹುದು. ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿಯಲ್ಲಿ ಹಣ ವ್ಯರ್ಥ ಆಗುವುದರ ಬದಲು ಇತಂಹ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ನೀವು ದಾನ ಮಾಡಿ, ನನ್ನ ಕೈಲಾದಷ್ಟು ನಾನು ದಾನ ಮಾಡುತ್ತೇನೆ. ಒಂದು ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸೋಣ’ ಎಂದು ಧನಂಜಯ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಡಾಲಿ ಡೇ ಆಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಡಾಲಿ ಡೇಯನ್ನು ಸಾರ್ಥಕವಾಗಿ ಆಚರಿಸಲು ಧನಂಜಯ್ ಅವರ ಅಭಿಮಾನಿ ಬಳಗ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆಚರಣೆಯ ರೂಪುರೇಷೆ ಏನು ಎಂಬುದನ್ನು ಅಭಿಮಾನಿಗಳು ಗೌಪ್ಯವಾಗಿಟ್ಟಿದ್ದು, ಖುದ್ದು ಧನಂಜಯ್ ಕೂಡಾ ಈ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv