ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‍ನಗರದಲ್ಲಿ ಕೊಲೆ ಮಾಡಿದ್ದ ಆರೋಪಿಯೊಬ್ಬ ತನ್ನ ಬರ್ತ್‍ಡೇ ಕೇಕ್ ಅನ್ನು ಪೊಲೀಸ್ ವಾಹನದಲ್ಲಿ ಕಟ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ವೀಡಿಯೋ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೊಲೀಸರ ಕಾರ್ಯ ದಕ್ಷತೆ ಮತ್ತು ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೋಷನ್ ಝಾ ಜೈಲಿನಲ್ಲಿದ್ದಾನೆ. ಉಲ್ಲಾಸನಗರದ ನಿವಾಸಿಯಾಗಿರುವ ರೋಷನ್ ಝಾ ಒಬ್ಬ ದರೋಡೆಕೋರನಾಗಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲೆ ದಾಖಲಾಗಿದೆ. ಇದನ್ನೂ ಓದಿ: ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಸಿದ್ಧತೆ
ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಝಾ ಅನ್ನು ಜೈಲಿನಿಂದ ಕಲ್ಯಾಣ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು. ಜೈಲಿನಿಂದ ಹೊರ ಹೋಗುತ್ತಿರುವ ಆರೋಪಿಯ ಬೆಂಬಲಿಗರು ಕೇಕ್ ತಂದಿದ್ದರು. ಅದನ್ನು ಆರೋಪಿ ಪೊಲೀಸ್ ವಾಹನದಲ್ಲಿಯೇ ಕುಳಿತುಕೊಂಡು ಕಿಟಕಿಯಿಂದ ಕತ್ತರಿಸಿದ್ದಾನೆ. ಇದನ್ನೂ ಓದಿ: ವಿಜಯಪುರ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ಪ್ರತ್ಯಕ್ಷ
ರೋಷನ್ ಝಾ ಕೇಕ್ ಕತ್ತರಿಸುತ್ತಿರುವ ವೀಡಿಯೋವನ್ನು ಆತನ ಬೆಂಬಲಿಗರು ಮೊಬೈಲ್‍ನಲ್ಲಿ ಸೆರೆಹಿಡಿದು ನಂತರ ತಮ್ಮ ವಾಟ್ಸಾಪ್ ಸ್ಟೇಟಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಳಿಕ ವೀಡಿಯೋ ವೈರಲ್ ಆಗಿದ್ದು, ಪೊಲೀಸರು ಆರೋಪಿಗೆ ಕೇಕ್ ಕತ್ತರಿಸಲು ಅವಕಾಶ ಮಾಡಿಕೊಟ್ಟಿದ್ದು, ಮಧ್ಯಪ್ರವೇಶಿಸದೇ ಇರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.