ಚಿಕ್ಕಮಗಳೂರು: ಅಣ್ಣೇನಹಳ್ಳಿ ಅಣ್ಣೆಗೌಡ, ಕೋಡಿಹಳ್ಳಿ ಕೋಡಿಗೌಡ, ಮಲ್ಲೇನಹಳ್ಳಿ ಮಲ್ಲೇಗೌಡ ಎಂಟು ದಿಕ್ಕಲ್ಲಿ 22 ಕಡೆ ಗಂಗಮ್ಮನ ಕೂರಿಸಿ, ಆರು ಸಾವಿರ ಜನರು, ಮೂರು ಸಾವಿರ ಕುಡುಗೋಲಿನಿಂದ ನಿರ್ಮಿಸಿದ್ದ ಕೆರೆ ಮೂರು ವರ್ಷಗಳ ಬಳಿಕ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಾನಪದದ ಬಾಯಲ್ಲಿ ಅದ್ಭುತ ಪರಿಕಲ್ಪನೆಯೊಂದಿಗೆ ಮೂಡಿದೆ ಗೀತೆಗೆ ಸಾಥ್ ನೀಡಿದ್ದ ಕೆರೆಯ ಕಾಫಿನಾಡಿನ ಮದಗದ ಕೆರೆ. ಈ ಕೆರೆಗೆ ಬರೋದೇ ಮಾಯದಂತ ಮಳೆ. ಆದರೆ ಈ ಬಾರಿ ಚಿಕ್ಕಮಗಳೂರಿನ ಗಿರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಜುಲೈ ತಿಂಗಳಿನಲ್ಲೇ ಈ ಕೆರೆ ಮೈದುಂಬಿ ಹರಿಯುತ್ತಿದೆ. ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿಗೆ ಈ ಕೆರೆ ತುಂಬಿರೋದು ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿದೆ.
Advertisement
ಸುಮಾರು 2,036ಕ್ಕೂ ಅಧಿಕ ಹೆಕ್ಟೇರ್ ನಲ್ಲಿರೋ ಈ ಕೆರೆ ಮೂರು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ಬರಪೀಡಿತ ತಾಲೂಕಿನ ಈ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಸುಮಧುರ ಕ್ಷಣವನ್ನು ಕಣ್ತುಂಬಿಕೊಂಡು ಸಂಭ್ರಮಿಸ್ತಿದ್ದಾರೆ. ನೋಡೋದಕ್ಕೆ ಸಮುದ್ರದಂತಿರೋ ಈ ಕೆರೆಯ ಬಳಿ ಸೆಲ್ಫಿ ಕ್ರೇಜಿನ ಕಿಂಗ್, ಕ್ವೀನ್‍ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಹಾಲ್ನೋರೆಯಂತೆ ಧುಮ್ಮಿಕ್ತಿರೋ ಈ ಕೆರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರೋದಂತು ಸತ್ಯ.
Advertisement
Advertisement
ಈ ಮಾಯದ ಕೆರೆಯ ಸುತ್ತ ಪ್ರಕೃತಿ ಸೌಂದರ್ಯವೇ ಮನೆ ಮಾಡಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಕಣ್ಣಾಯಿಸಿದಲ್ಲೆಲ್ಲಾ ಹಸಿರ ವನರಾಶಿ. ತಣ್ಣಗೆ ಬೀಸೋ ಸ್ವಚ್ಛ ಗಾಳಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಮಲೆನಾಡಲ್ಲಿ ದಶಕದ ಬಳಿಕ ವರುಣನ ಆರ್ಭಟ ಜೋರಾಗಿದ್ದು, ಎರಡು ವರ್ಷಗಳ ಬಳಿಕ ಜುಲೈ ತಿಂಗಳಿನಲ್ಲೇ ಕೋಡಿ ಬಿದ್ದಿರೋದು ರೈತರಿಗಂತು ಹಾಲು ಕುಡಿದಷ್ಟು ಸಂತೋಷವಾಗಿದೆ.
Advertisement
ಈ ಬಾರಿ ಮಾತ್ರ ಈ ಕೆರೆಗೆ ಮಯಾದಂತ ಮಳೆ ಬಂದಿಲ್ಲ. ಬದಲಾಗಿ ಕಾಫಿನಾಡಿನ ಗಿರಿ ಭಾಗದ ಮಳೆಯೇ ಬಂದಿರೋದು. ಈ ಕೆರೆ ತುಂಬೋದ್ರಿಂದ ಕಡೂರಿನ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗೋದರ ಜೊತೆ ಜನ-ಜಾನುವಾರುಗಳಿಗೆ ಕುಡಿಯೋ ನೀರು ಸಿಕ್ಕಿದೆ. ಅಲ್ಲದೇ ಬಯಲುಸೀಮೆಯ 25ಕ್ಕೂ ಹೆಚ್ಚು ಕೆರೆಗಳಿಗೆ ಈ ಕೆರೆ ಸಂಪರ್ಕ ಸೇತುವೆಯಾಗಿರೋದ್ರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆ ಬರದಿಂದ ಬಸವಳಿದಿದ್ದ ಕಡೂರಿನ ರೈತರಿಗೆ ಮದಗದ ಕೆರೆ ತುಂಬಿರೋದು ಜೀವಕಳೆ ತಂದಂತಾಗಿದೆ. ಆದ್ದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಆದರೆ ಮತ್ತೊಂದೆಡೆ ಕೆರೆಯನ್ನ ಮತ್ತಷ್ಟು ಅಭಿವೃದ್ಧಿಪಡಿಸಿ ಬೇಸಿಗೆಯಲ್ಲೂ ಕೆರೆಗೆ ಮಲೆನಾಡಿನಲ್ಲಿ ಪೋಲಾಗುವ ನೀರನ್ನು ಹರಿಸಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.