ಅಮರಾವತಿ: ಆಂಧ್ರಪ್ರದೇಶದ (Andhrapradesh) ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಧುವಿನ ಕುಟುಂಬದವರೇ ಆಕೆಯನ್ನು ಸ್ಥಳದಿಂದ ಬಲವಂತವಾಗಿ ಕರೆದೊಯ್ಯಲು ಪ್ರಯತ್ನಿಸಿದ ಘಟನೆ ನಡೆದಿದೆ.
ಈ ಘಟನೆ ಕಡಿಯಂ ಪ್ರದೇಶದಲ್ಲಿ ನಡೆದಿದ್ದು, ಸ್ನೇಹಾ ಮತ್ತು ಬತ್ತಿನ ವೆಂಕಟಾನಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಮಂಟಪಕ್ಕೆ ಏಕಾಏಕಿ ನುಗ್ಗಿದ ವಧುವಿನ ಕುಟುಂಬ ಆಕೆಯನ್ನು ಅಪಹರಣ ಮಾಡಲು ಯತ್ನಿಸಿದೆ. ಅಲ್ಲದೇ ಅಪಹರಣ ತಡೆಯಲು ಬಂದವರ ಮೇಲೆ ಮೆಣಸಿನ ಪುಡಿಯನ್ನು ಎರಚಿದ್ದಾರೆ.
ವಧು ಸ್ನೇಹಾಳ ತಾಯಿ, ಸಹೋದರ ಮತ್ತು ಸೋದರಸಂಬಂಧಿಗಳು ಆಕೆಯನ್ನು ಸ್ಥಳದಿಂದ ಬಲವಂತವಾಗಿ ಎಳೆದೊಯ್ಯಲು ಯತ್ನಿದ್ದಾರೆ. ಆದರೆ ಸ್ನೇಹಾ ಹರಸಾಹಪಟ್ಟು ಅವರ ಕೈಯಿಂದ ತಪ್ಪಿಸಿಕೊಂಡಿದ್ದಾಳೆ. ಇದರ ವೀಡಿಯೋ ಮಂಟಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪಹರಣ ಯತ್ನವನ್ನು ವರ, ಆತನ ಕುಟುಂಬದವರು ಹಾಗೂ ಸ್ನೇಹಿತರು ವಿಫಲಗೊಳಿಸಿದ್ದಾರೆ. ಗಲಾಟೆಯಲ್ಲಿ ವರನ ಸ್ನೇಹಿತರೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಸ್ನೇಹಾ ಅವರ ಕುಟುಂಬವು ಈಗ ಹಲ್ಲೆ, ಅಪಹರಣ ಯತ್ನ ಮತ್ತು ಚಿನ್ನ ಕಳ್ಳತನ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದೆ. ಈ ಮದುವೆಗೆ ಅವರ ವಿರೋಧದ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಇಂದು ಮಧ್ಯರಾತ್ರಿ ವಿಶ್ವವಿಖ್ಯಾತ ಐತಿಹಾಸಿಕ ಕರಗೋತ್ಸವಕ್ಕೆ ವಿದ್ಯುಕ್ತ ಚಾಲನೆ
ಘಟನೆ ಕುರಿತು ಮಾತನಾಡಿದ ಕಡಿಯಂ ಸರ್ಕಲ್ ಇನ್ಸ್‌ಪೆಕ್ಟರ್ ಬಿ ತುಳಸಿಧರ್, ವೀರಬಾಬು ಕುಟುಂಬದವರು ಸ್ನೇಹಾ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.