ಮಂಗಳೂರು: 90ರ ದಶಕದಲ್ಲಿ ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವದು. ಒಂದೇ ರಾತ್ರಿಯಲ್ಲಿ ಮನೆಯಲ್ಲಿ ಮಲಗಿದ್ದ ತನ್ನ ಸಂಬಂಧಿಕ ನಾಲ್ವರನ್ನು ಭಯಾನಕವಾಗಿ ಕೊಂದು ಹಾಕಿದ್ದ ಘಟನೆ. ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಸುದೀರ್ಘ 28 ವರ್ಷಗಳ ಜೈಲು ವಾಸದ ಬಳಿಕ ಬಿಡುಗಡೆಯಾಗುತ್ತಿದ್ದಾನೆ. ಆದರೆ ಆತನ ಕುಟುಂಬಸ್ಥರೇ ಅಪರಾಧಿಯನ್ನು ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಗೋಗರೆದಿದ್ದಾರೆ.
ಚಿನ್ನ ಮತ್ತು ಹಣದಾಸೆಗಾಗಿ ಉಂಡ ಮನೆಗೇ ದ್ರೋಹ ಬಗೆದವನ ಕತೆಯಿದು. ವೃತ್ತಿಯಲ್ಲಿ ಟೈಲರ್ ಆಗಿದ್ದ ವ್ಯಕ್ತಿ ಜೂಜಾಟಕ್ಕೆ ಬಿದ್ದು ತನ್ನ ಅತ್ತೆ ಮತ್ತು ಅವರ ಕುಟುಂಬಸ್ಥರನ್ನೇ ಕೊಂದು ಹಾಕಿದ್ದ ಘಟನೆಯದು. ಸುದೀರ್ಘ 28 ವರ್ಷಗಳ ಹಿಂದೆ ಅಂದರೆ, 1993ರ ಫೆಬ್ರವರಿ 23ರಂದು ಮಂಗಳೂರು ಹೊರವಲಯದ ವಾಮಂಜೂರಿನಲ್ಲಿ ಘಟನೆ ನಡೆದಿತ್ತು. ವಾಮಂಜೂರಿನಲ್ಲಿ ನೆಲೆಸಿದ್ದ ಪ್ರವೀಣ್ ತನ್ನ ಸೋದರತ್ತೆ 75 ವರ್ಷದ ಅಪ್ಪಿ ಶೇರಿಗಾರ್ತಿ, ಆಕೆಯ ಮಗಳು 36 ವರ್ಷದ ಶಕುಂತಳಾ, 9 ವರ್ಷದ ಮೊಮ್ಮಗಳು ದೀಪಿಕಾ ಮತ್ತು ಇನ್ನೊಬ್ಬ ಮಗ 30 ವರ್ಷದ ಗೋವಿಂದನನ್ನು ಭೀಭತ್ಸವಾಗಿ ಕೊಲ್ಲಲಾಗಿತ್ತು. ಅದೇ ಮನೆಯಲ್ಲಿ ಉಂಡು ಮಲಗಿದ್ದ ಪ್ರವೀಣ್ ಕೊಲೆ ಆರೋಪಿಯಾಗಿದ್ದ. ನಂತರ ಕಂಬಿ ಏನಿಸುತ್ತಿದ್ದ. ಇದೀಗ ಸುದೀರ್ಘ 23 ವರ್ಷಗಳ ಕಾಲ ಬೆಳಗಾವಿ ಜೈಲಿನಲ್ಲಿದ್ದ ಪ್ರವೀಣನನ್ನು ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇದೆ. ಆದರೆ ನಾಲ್ವರನ್ನು ಭೀಕರವಾಗಿ ಕೊಂದಿದ್ದ ಪ್ರವೀಣ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲೇಬಾರದು. ಆತ ಜೈಲಿನಿಂದ ಹೊರಬಂದಲ್ಲಿ ನಮ್ಮನ್ನೂ ಸಾಯಿಸುತ್ತಾನೆ ಎಂಬ ಭೀತಿಯಿದೆ ಎಂದು ಆತನ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಿದ್ದ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ
ಕೃತ್ಯ ನಡೆದು ಒಂದೇ ವಾರದಲ್ಲಿ ಆಗಿನ ಎಸ್‍ಐ ಜಯಂತ್ ಶೆಟ್ಟಿ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಹತ್ತಿರದ ಸಂಬಂಧಿಕರನ್ನೇ ಚಿನ್ನಕ್ಕಾಗಿ ಕೊಂದಿದ್ದ ಕ್ರೌರ್ಯಕ್ಕಾಗಿ ಆರೋಪಿಗೆ ಮಂಗಳೂರಿನ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆಯನ್ನು ಬಳಿಕ ಸುಪ್ರೀಂ ಕೋರ್ಟ್ ಜೀವಾವಧಿಗೆ ಇಳಿಸಿತ್ತು. ಇದೀಗ ಸನ್ನಡತೆ ಆಧಾರದಲ್ಲಿ ಪ್ರವೀಣ್‍ನನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಪ್ರವೀಣ್‍ನ ಹೆಂಡತಿ ಸೇರಿದಂತೆ ಕುಟುಂಬಸ್ಥರು ಮಂಗಳೂರಿನ ಪೊಲೀಸ್ ಕಮಿಷನರ್ ಶಶಿ ಕುಮಾರ್‌ರನ್ನು ಭೇಟಿಯಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜೈಲಿನಿಂದ ಆತ ಹೊರಬಂದಲ್ಲಿ ನಮ್ಮ ಜೀವಕ್ಕೂ ಅಪಾಯವಿದೆ. ಹಣ, ಆಸ್ತಿಗಾಗಿ ಆತ ಏನು ಮಾಡುವುದಕ್ಕೂ ಹೇಸದ ವ್ಯಕ್ತಿ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸ್ ಕಮೀಷನರ್ ಸಂತ್ರಸ್ತರ ಹೇಳಿಕೆಗಳನ್ನು ಪಡೆದು ಪ್ರವೀಣ್‍ನ ಬಿಡುಗಡೆಗೆ ವಿರೋಧವಿದೆ ಎಂದು ವರದಿ ತಯಾರಿಸಿ ಸರ್ಕಾರಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹಣ ಕದಿಯುವುದಕ್ಕೂ ಮುನ್ನ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಅರೆನಗ್ನ ಕಳ್ಳ
ಆದರೆ ಬೆಳಗಾವಿ ಜೈಲಿನ ಅಧಿಕಾರಿಗಳು ಈಗಾಗಲೇ ಪ್ರವೀಣ್‍ನ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಮತ್ತೆ ತಡೆ ಹೇರುತ್ತಾರೆಯೇ ಎನ್ನುವ ಬಗ್ಗೆ ಕುಟುಂಬಸ್ಥರಲ್ಲೂ ಆತಂಕ ಇದೆ.