ಕಾರವಾರ: ಸ್ವದೇಶಿ ನಿರ್ಮಿತ ಐಎನ್ಎಸ್ ಸಮರ್ಥಕ್ (INS Samarthak) ಯುದ್ದ ನೌಕೆಯನ್ನು ಕಾರವಾರದ ಅರಗಾದಲ್ಲಿರುವ ಕದಂಬಾ ನೌಕಾ ನೆಲೆಯಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ (C.P.Radhakrishnan) ಅವರು ದೇಶದ ಭದ್ರತೆಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಚಿಕ್ಕವರಾಗಿದ್ದಾಗ ಭಾರತೀಯ ನೌಕಾ ಸೇನೆ 1971 ರಲ್ಲಿ ಕರಾಚಿಯಿಂದ ಬಂದ ಸಬ್ ಮೆರಿನ್ನನ್ನು ಹೊಡೆದುದನ್ನು ಆಕಾಶವಾಣಿಯಲ್ಲಿ ಕೇಳಿದಾಗ ಮೈ ರೋಮಾಂಚನವಾಗಿತ್ತು. ರಾಜ ರಾಜಚೋಳ ಹಾಗೂ ರಾಜೇಂದ್ರ ಚೋಳರು ತಮ್ಮ ನೌಕಾಸೇನೆಯ ಸಹಾಯದೊಂದಿಗೆ ಬಂಗಾಳಕೊಲ್ಲಿಯಿಂದ ಹಿಡಿದು ದಕ್ಷಿಣ ಪೂರ್ವ ಏಷ್ಯಾದ ಅನೇಕ ದೇಶಗಳ ಮೇಲೆ ಹಿಡಿತ ಸಾಧಿಸಿದರು. ಜಗತ್ತಿನಲ್ಲಿ ಒಂದು ಸಾಮಾನ್ಯ ನೌಕಾಬಲವಾಗಿ ಆರಂಭಗೊಂಡ ಭಾರತೀಯ ನೌಕಾಸೇನೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ಸ್ವಾವಲಂಬಿಯಾಗಿ ಹೊರಹುಮ್ಮಿದೆ. ಭಾರತದ ರಕ್ಷಣಾ ಉತ್ಪಾದನಾ ನೆಲೆಯನ್ನು ಬಲಪಡಿಸುವಲ್ಲಿ ಖಾಸಗಿ ಉದ್ಯಮಗಳು ಮಹತ್ವದ ಪಾತ್ರ ವಹಿಸಬಲ್ಲದು ಎಂಬುದನ್ನ LNT ಕಂಪನಿ ತೋರಿಸಿಕೊಟ್ಟಿದೆ.
ಶಕ್ತಿಯ ಸಂಕೇತವಾಗಿರುವ INS ಸಮರ್ಥಕ್ ಆತ್ಮವಿಶ್ವಾಸದಿಂದ ಕೂಡಿದ ಸಾಮರ್ಥ್ಯವುಳ್ಳ, ಸ್ವಾವಲಂಬಿ ಭಾರತವನ್ನು ಮುಂದೆ ಕೊಂಡೊಯ್ಯಲಿದೆ. INS ಸಮರ್ಥಕ್ ಸುರಕ್ಷಿತ ಸಮುದ್ರಯಾನ ನಡೆಸಲಿ, ದೇಶದ ಉಜ್ವಲ ಭವಿಷ್ಯಕ್ಕೆ ವಿಶೇಷ ಕೊಡಿಗೆ ನೀಡಲಿ ಎಂದು ಶುಭಕೋರುತ್ತೇನೆ. ಈ ಹಡಗನ್ನು ದೈರ್ಯ ಹಾಗೂ ಸಮರ್ಪಣಾ ಭಾವನೆಯಿಂದ ಮುನ್ನಡೆಸಿ ಎಂದು ನೌಕಾದಳದವರಿಗೆ ಸಂದೇಶ ನೀಡಿದರು.
ನೌಕಾದಳದವರು ಸಮುದ್ರದಲ್ಲಿ ದೇಶದ ಭದ್ರತೆಗಾಗಿ ಕಾರ್ಯನಿರ್ವಹಿಸುವಾಗ ಭೂಮಿಯ ಮೇಲಿರುವ ನಮ್ಮ ಜನರು ಇನ್ನಷ್ಟು ಸುರಕ್ಷಿತರಾಗಿರುತ್ತಾರೆ. ಸನ್ನದ್ಧತೆಯಲ್ಲಿ ಸದಾ ಮುಂಚೂಣಿಯಲ್ಲಿ ಇರುವ ದೇಶದ ರಕ್ಷಣೆಗಾಗಿ ದೃಢ ಸಂಕಲ್ಪ ಹೊಂದಿರುವ ಭಾರತೀಯ ನೌಕಾ ಪಡೆಯು ಇನ್ನಷ್ಟು ಬಲಿಷ್ಟವಾಗಲಿದೆ. ಸ್ವಾವಲಂಬಿತನವು ಭಾರತವನ್ನು ಇನ್ನಷ್ಟು ಮುಂದೆ ಕೊಂಡೊಯ್ಯಲಿದೆ ಎಂದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ರವರು ಹೇಳಿದರು. ಕಾರ್ಯಕ್ರಮದಲ್ಲಿ ಅಡ್ಮಿರಲ್ ಕೃಷ್ಣಸ್ವಾಮಿನಾಥನ್ ,ಕರ್ನಾಟಕ ಫ್ಲಾಗ್ ಆಫೀಸರ್ ವಿಕ್ರಮ್ ಮೆನನ್ ,ರಾಜ್ಯ ಸಚಿವ ಸಂತೋಷ್ ಲಾಡ್ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

