Connect with us

Latest

ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ

Published

on

ಜೈಪುರ: ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದು, ತನ್ನನ್ನು ಎನ್ ಕೌಂಟರ್ ಮಾಡವ ಮಾಹಿತಿ ಲಭಿಸಿತ್ತು ಎಂದು ಹೇಳಿದ್ದಾರೆ.

ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಬಿಜೆಪಿ ನಾಯಕರನ್ನು ಹೆಸರನ್ನು ಉಲ್ಲೇಖಿಸದೇ ರಾಜಸ್ಥಾನ ಹಾಗೂ ಗುಜರಾತ್ ಸರ್ಕಾರ ಸಂಸ್ಥೆಗಳು ತಮ್ಮ ವಿರುದ್ಧ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಪೊಲೀಸರಿಗೆ ರಾಜಕೀಯ ಒತ್ತಡದಿಂದ ಕಾರ್ಯನಿರ್ವಹಿಸದಂತೆ ಮನವಿ ಮಾಡಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 10 ವರ್ಷದ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ ಟಾರ್ಗೆಟ್ ಮಾಡಲಾಗಿದ್ದು, ರಾಜಸ್ಥಾನ ಪೊಲೀಸರು ತನ್ನನ್ನು ಬಂಧನ ಮಾಡಲು ಆಗಮಿಸಿದ್ದರು. ಈ ವೇಳೆ ತಮ್ಮನ್ನು ಎನ್‍ಕೌಂಟರ್ ಮಾಡಲು ಪ್ಲಾನ್ ಮಾಡಲಾಗಿತ್ತು ಎನ್ನುವ ಮಾಹಿತಿ ಸಿಕ್ಕಿತ್ತು ಎಂದು ಹೇಳಿದರು.

ಇದರಿಂದ ನನ್ನನ್ನು ಕೊಲೆ ಮಾಡಬಹುದೆಂಬ ಭೀತಿ ಉಂಟಾಯಿತು. ಸುರಕ್ಷತೆಗಾಗಿ ತಕ್ಷಣ ಕಚೇರಿಗೆ ತೆರಳಲು ನಿರ್ಧರಿಸಿ ಥಟ್ಲೆಜ್‍ನಲ್ಲಿರುವ ಕಾರ್ಯಕರ್ತರೊಬ್ಬರ ಮನೆಗೆ ತೆರಳಿದೆ. ಈ ಮುನ್ನ ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದೆ. ನಾನು ರಾಜಸ್ಥಾನ ಮುಖ್ಯಮಂತ್ರಿ ಮತ್ತು ಗೃಹಸಚಿವರನ್ನು ಸಂಪರ್ಕಿಸಿ ಮಾಹಿತಿ ಪಡೆದೆ. ರಾಜಸ್ಥಾನ ಸರ್ಕಾರದ ಆದೇಶವಿದೆ ಎಂದು ಅವರು ತಿಳಿಸಿದರು. ನಂತರ ರಾಜಸ್ಥಾನದಲ್ಲಿರುವ ನನ್ನ ವಕೀಲರ ಜತೆ ವಾರಂಟ್ ವಿಷಯ ತಿಳಿಸಿದೆ. ಬಳಿಕ ಜೈಪುರಕ್ಕೆ ವಿಮಾನದಲ್ಲಿ ತೆರಳಲು ನಿರ್ಧರಿಸಿ ಏರ್‍ಪೋರ್ಟ್ ಕಡೆಗೆ ಹೊರಡುವ ಮಾರ್ಗಮಧ್ಯೆ ಪ್ರಜ್ಞೆತಪ್ಪಿದೆ. ಬಳಿಕ ರಾತ್ರಿ ನಾನು ಆಸ್ಪತ್ರೆಯಲ್ಲಿದ್ದೇನೆ ಎಂಬುದು ಗೊತ್ತಾಯಿತು ಎಂದು ತೊಗಾಡಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಧ್ವನಿ ಅಡಗಿಸುವ ಯತ್ನ: ಕೆಲವರು ನನ್ನ ಧ್ವನಿಯನ್ನು ಅಡಗಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ರಾಮ ಮಂದಿರ ಗೋ ಹತ್ಯೆ ನಿಷೇಧ ಹಾಗೂ ರೈತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೋರಾಟ ಮಾಡುತ್ತಿದ್ದು, ಈ ಕಾರಣದಿಂದಲೇ ತಮ್ಮನ್ನು ಗುರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಯಾರು ನಿಮ್ಮ ಮೇಲೆ ಮೇಲೆ ದಾಳಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಈಗ ಯಾರ ಮೇಲೂ ಆರೋಪ ಮಾಡಲು ಸಾಧ್ಯವಿಲ್ಲ. ಆದರೆ ಈ ಕುರಿತ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡುವ ಮೂಲಕ ಮಾತನಾಡಿತ್ತೇನೆ ಎಂದರು.

ಇದೇ ವೇಳೆ ಪ್ರವೀಣ್ ತೊಗಾಡಿಯಾ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿದ್ದು, ಸಂಪೂರ್ಣ ಚೇತರಿಕೆ ಆಗುವವರೆಗೂ ಆಸ್ಪತ್ರಯಲ್ಲೇ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

12 ವರ್ಷಗಳ ಹಳೆಯ ಪ್ರಕರಣ: ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ಅವರನ್ನು ಬಂಧನ ಮಾಡಲು ಸೋಮವಾರ ಬೆಳಗ್ಗೆ ರಾಜಸ್ಥಾನ ಪೊಲೀಸರು ಆಗಮಿಸದ ವೇಳೆ ಎ-ಝೆಡ್ ಭದ್ರತೆಯನ್ನು ಹೊಂದಿರುವ ಅವರು ಅಹಮದಾಬಾದ್ ನಗರದ ಪಾಲ್ಡಿ ಪ್ರದೇಶದ ತಮ್ಮ ನಿವಾಸದಿಂದ ಕಾಣೆಯಾಗಿದ್ದರು. ನಂತರ ಲೋ ಬಿಪಿ ಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನ ಆಸ್ಪತ್ರೆಗೆ ಕರೆತರಲಾಗಿತ್ತು.

ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ವಿರುದ್ಧ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ) ಅಡಿಯಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಅದರೆ ಅವರ ಮನೆಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ವೇಳೆಯಲ್ಲಿ ಅವರು ಕಾಣೆಯಾಗಿದ್ದರು.

ಪೊಲೀಸರು ತೊಗಾಡಿಯಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ವಿಹೆಚ್‍ಪಿ ಕಾರ್ಯಕರ್ತರು ಸೋಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಘೋಷಣೆಗಳನ್ನ ಕೂಗಿ, ಸರ್‍ಖೇಜ್- ಗಾಂಧಿನಗರ ಹೆದ್ದಾರಿಯಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ತೊಗಾಡಿಯ ಅವರು ಇರುವ ಸ್ಥಳವನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದರು.

ಆದ್ರೆ ತೊಗಾಡಿಯಾ ಅವರನ್ನು ನಮ್ಮ ತಂಡ ಬಂಧಿಸಿಲ್ಲ ಎಂದು ರಾಜಸ್ಥಾನ ಪೊಲೀಸ್‍ನ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ವಸಿಷ್ಠ ಸ್ಪಷ್ಟಪಡಿಸಿದ್ದರು.

https://www.youtube.com/watch?v=nR9PoIhWD9M

Click to comment

Leave a Reply

Your email address will not be published. Required fields are marked *

www.publictv.in