ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದಿದ್ದ ಬೆಳೆಗಳನ್ನು ಕೆಲವರು ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ. ಇನ್ನೂ ಕೆಲವರು ತಿಪ್ಪೆಗೆ ಸುರಿಯುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ತರಕಾರಿಯನ್ನ ಕುರಿ ಮತ್ತು ಮೇಕೆಗಳಿಗೆ ಮೇವು ನೀಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ರೈತ ಗುರುನಾಥ್ ಹುಕ್ಕೇರಿ ತನ್ನ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಎಲೆಕೋಸು, ಇನ್ನೊಂದು ಎಕರೆಯಲ್ಲಿ ಹೂಕೋಸು ಬೆಳೆಯನ್ನ ಬೆಳೆಸಿದ್ದರು. ಸುಮಾರು 2 ಲಕ್ಷ ಖರ್ಚು ಮಾಡಿ ಫಲವತ್ತಾದ ತರಕಾರಿ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ರೈತ ಈಗ ಕಂಗಾಲಾಗಿದ್ದಾರೆ.
Advertisement
Advertisement
ಎಲೆಕೋಸು ಮತ್ತು ಹೂಕೋಸು ಉತ್ತಮ ಫಸಲು ಬಂದಿದೆ. ಆದರೆ ಲಾಕ್‍ಡೌನ್ ಎಫೆಕ್ಟ್ ಹಿನ್ನೆಲೆಯಲ್ಲಿ ಬೆಳೆದ ಬೆಳೆ ಮಾರಾಟ ಮಾಡಲು ಸೂಕ್ತವಾದ ಮಾರುಕಟ್ಟೆ ಸಿಗುತ್ತಿಲ್ಲ. ಹೀಗಾಗಿ ಬೆಳೆದು ನಿಂತ ತನ್ನ ಎರಡು ಎಕರೆ ಜಮೀನಲ್ಲಿ ಕುರಿ ಮತ್ತು ಮೇಕೆಗಳನ್ನು ಮೇಯಲು ಬಿಟ್ಟಿದ್ದಾರೆ. ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
Advertisement
ಎರಡು ಎಕರೆ ಪ್ರದೇಶದಲ್ಲಿ ಎಲೆಕೋಸು ಮತ್ತು ಹೂಕೋಸನ್ನು 2-3 ತಿಂಗಳ ಕಾಲ ನೀರುಣಿಸಿ ಪೋಷಣೆ ಮಾಡಿದ್ದೆ. ಆದರೆ ಕೊರೊನಾ ಮಹಾಮಾರಿ ದುಡಿದು ತಿನ್ನುವ ರೈತರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತೆ ಮಾಡಿದೆ. ರೈತರು ಬೆಳೆದ ಬೆಳೆಗಳನ್ನು ಕಸಿದುಕೊಂಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.