ಬಳ್ಳಾರಿ: ಹಂಪಿ ಉತ್ಸವಕ್ಕಾಗಿ ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಜಿ ಶಾಸಕ ಹಾಗೂ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ನೂರಾರು ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಕ್ಕೆ ಅವರನ್ನು ಬಳ್ಳಾರಿ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಡಿಸಿ ಕಚೇರಿ ಆವರಣದ ರಸ್ತೆ ಮೇಲೆ ಮಲಗಿ ಹಂಪಿ ಉತ್ಸವ ನಡೆಸುವಂತೆ ವಾಟಾಳ್ ನಾಗರಾಜ್ ಆಗ್ರಹಿಸಿದರು. ಹೀಗಾಗಿ ಪೊಲೀಸರು ವಾಟಾಳ್ ನಾಗರಾಜ್ ಸೇರಿದಂತೆ ಪ್ರತಿಭಟನಾ ನಿರತ ಹೋರಾಟಗಾರರನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
Advertisement
Advertisement
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್, ಹಂಪಿ ಉತ್ಸವದ ಬಗ್ಗೆ ಸಚಿವರು, ಶಾಸಕರು, ಸಂಸದರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಹಂಪಿ ಉತ್ಸವ ನಡೆಸದಿದ್ದರೆ ಇವರೆಲ್ಲ ರಾಜೀನಾಮೆ ನೀಡಬೇಕು. ಜೊತೆಗೆ ಹಂಪಿಯ ಸ್ಮಾರಕಗಳನ್ನ ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Advertisement
Advertisement
ರಾಜ್ಯದಲ್ಲಿ ದಸರಾ ಉತ್ಸವವನ್ನು ಚಾಚುತಪ್ಪದೆ ಮಾಡ್ತೀರಿ ಆದ್ರೆ ಉತ್ತರ ಕರ್ನಾಟಕದ ಹೆಮ್ಮೆಯ ಹಂಪಿ ಉತ್ಸವವನ್ನು ನಿರ್ಲಕ್ಷ್ಯಿಸುವುದು ಯಾರಿಗೂ ಒಪ್ಪಿಗೆಯಾಗುವುದಿಲ್ಲ. ಒಬ್ಬ ಮಂತ್ರಿ ಬಂದು ಹಂಪಿ ಉತ್ಸವ ಒಂದು ದಿನ ಮಾಡುತ್ತೀವಿ ಅಂತಾರೆ. ಇನ್ನೊಬ್ಬರು ಬಂದು ಎರಡು ದಿನ ಮಾಡ್ತೀವಿ ಅಂತಾರೆ. ಸರ್ಕಾರ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಉತ್ತರ ಕರ್ನಾಟಕವನ್ನ ಸರ್ಕಾರ ಕಡೆಗಣಿಸಿದೆ. ಇಲ್ಲಿನ ಜನರನ್ನು ಸರ್ಕಾರ ಗುಲಾಮರ ರೀತಿ ನೋಡುತ್ತಿದೆ. ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv