Connect with us

Chamarajanagar

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ, ರಾಹುಲ್ ಗಾಂಧಿ ಕೇರಳಕ್ಕೆ ಬೆಂಬಲ ಕೊಡಬಾರದು- ವಾಟಾಳ್

Published

on

ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದ್ದು ಖಂಡನೀಯ. ಯಾವುದೇ ಕಾರಣಕ್ಕೂ ಕೇರಳಕ್ಕೆ ಬೆಂಬಲ ಕೊಡಬಾರದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಕೇರಳದ ಹೋರಾಟವನ್ನು ಖಂಡಿಸಿ ಬಂಡೀಪುರ ಅಭಯಾರಣ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಮಲಗುವ ಮೂಲಕ ಹೋರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಹುಲಿ, ಆನೆ, ಚಿರತೆ ಸೇರಿದಂತೆ ವಿವಿಧ ಪ್ರಾಣಿ ಸಂಕುಲಗಳಿವೆ. ನಮ್ಮಲ್ಲಿ ಆನೆ, ಹುಲಿ, ಚಿರತೆಗಳು ಹೆಚ್ಚಿವೆ. ವಾಹನಗಳ ಸಂಚಾರಕ್ಕೆ ಅನುಮತಿ ನೀಡುವುದರಿಂದ ಪ್ರಾಣಿ ಸಂಕುಲ ಅಪಘಾತಕ್ಕೆ ಬಲಿಯಾಗುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ – ಕೇರಳ ಹೋರಾಟಕ್ಕೆ ರಾಹುಲ್ ಬೆಂಬಲ

ಪರಿಸ್ಥಿತಿಯನ್ನು ರಾಹುಲ್ ಗಾಂಧಿಯವರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಹೊಸ ರಸ್ತೆಯೂ ಬೇಡ, ಇದರಿಂದ ವಾಹನಗಳು ಇನ್ನೂ ಹೆಚ್ಚು ಸಂಚರಿಸುತ್ತವೆ. ಮೇಲ್ಸೇತುವೆಯೂ ಬೇಡ, ಇದರಿಂದ ಲೈಟ್ ಬೆಳಕು ಬಿದ್ದು ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಮಾತ್ರವಲ್ಲದೆ, ಅಂಡರ್ ಬ್ರಿಡ್ಜ್ ಮಾಡುತ್ತೇವೆ ಎಂದರೂ ಬೇಡ. ಯಾವುದೇ ಕಾರಣಕ್ಕೂ ರಾತ್ರಿ ನಿಷೇಧವನ್ನು ತೆರವುಗೊಳಿಸಬಾರದು. ರಾಹುಲ್ ಗಾಂಧಿಯವರು ಕೇರಳಕ್ಕೆ ಬೆಂಬಲ ಕೊಡಬಾರದು ಎಂದು ಕಿಡಿಕಾರಿದರು.

ಇದರಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಬಂಡೀಪುರದ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇದ ತೆರವುಗೊಳಿಸಿದರೆ ವನ್ಯಜೀವಿಗಳಿಗೆ ಕಂಟಕವಾಗಲಿದೆ. ಅಲ್ಲದೆ ಈ ಮಾರ್ಗದಲ್ಲಿ ಸ್ಮಗ್ಲಿಂಗ್‍ನಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು ಹಾಗು ಯಾವುದೇ ಕಾರಣಕ್ಕೂ ನಿಷೇಧ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.

Click to comment

Leave a Reply

Your email address will not be published. Required fields are marked *

www.publictv.in